ಅಕ್ಕ ಮಹದೇವಿಯ ಆದರ್ಶಗಳು ಪ್ರತಿಯೊಬ್ಬರಿಗೂ ದಾರೀದೀಪವಾಗಬೇಕು
ಮುಂಡರಗಿ 13: ಗುರುವಿನ ಕೃಪೆ ಎಲ್ಲರಿಗೂ ಅಗತ್ಯವಿದೆ. ಗುರುವಿಗೆ ಶರಣಾಗಿ ಲಿಂಗದೀಕ್ಷೆ ಪಡೆದುಕೊಂಡಾಗ ಮಾತ್ರ ನಿಜವಾದ ಹುಟ್ಟು. ಲಿಂಗದೀಕ್ಷೆ ಇಲ್ಲದೇ ಮೋಕ್ಷವಿಲ್ಲ. ಲಿಂಗದೀಕ್ಷೆ ಮೂಲಕ ಜ್ಞಾನ ಪಡೆಯಲು ಸಾಧ್ಯ ಎಂದು ಕದಳಿವನಮಠದ ಶರಣೆ ಅಕ್ಕಮಹಾದೇವಿ ತಾಯಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ಶನಿವಾರ ಜರುಗಿದ ಅಲ್ಲಮಪ್ರಭು, ಮಹಾದೇವಿ ಅಕ್ಕನವರ ಜಯಂತಿ ಹಾಗೂ ಶ್ರೀಮಠದ 9ನೇ ಪೀಠಾಧಿಪತಿ ವೆಂಕಟಾಪೂರ ಶ್ರೀಗಳ 58ನೇ ಪುಣ್ಯ ಸ್ಮರಣೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಕ್ಕ ಮಹದೇವಿಯ ಆದರ್ಶಗಳು ಪ್ರತಿಯೊಬ್ಬರಿಗೂ ದಾರೀದೀಪವಾಗಿವೆ. ಹೀಗಾಗಿ ಪರಮಾತ್ಮನು ಸಮಾಜದಲ್ಲಿ ಪುರುಷ ಹಾಗೂ ಮಹಿಳೆ ಇಬ್ಬರನ್ನು ಸಮಾನವಾಗಿ ಸೃಷ್ಟಿ ಮಾಡಿದ್ದಾನೆ. ಇತರರಿಗೂ ಅನುಕೂಲವಾಗಲೆಂದು ನೂರಾರು ಗ್ರಂಥ ಬರೆದಿರುವಂತ ಡಾ.ಅನ್ನದಾನೀಶ್ವರ ಶ್ರೀಗಳು ಶಿವನ ಅವತಾರಿಯಾಗಿದ್ದಾರೆ ಎಂದರು.
ಅಳವಂಡಿಯ ಶ್ರೀ ಮರುಳರಾಧ್ಯ ಶಿವಾಚಾರ್ಯರು ಮಾತನಾಡಿ, ಶರಣೆ ಅಕ್ಕ ಮಹಾದೇವಿ ಅವರ ಒಂದೊಂದು ವಚನವು ಅದ್ಭುತವಾಗಿವೆ. ಅವುಗಳಿಂದ ಮನುಷ್ಯನ ಜೀವನದಲ್ಲಿ ಅಧಿಕ ಜ್ಞಾನ ಕಂಡುಕೊಳ್ಳಬಹುದು. ಅದರೊಟ್ಟಿಗೆ ಪ್ರತಿಯೊಬ್ಬರೂ ಮೌಲ್ಯಯುತ ಬದುಕನ್ನು ತಮ್ಮದಾಗಿಸಿಕೊಳ್ಳಲು ಸಹಕಾರಿಯಾಗುತ್ತವೆ. ಇಂತಹ ಅರ್ಥಗರ್ಭಿತವಾಗಿ ವಚನಗಳನ್ನು ಅಧ್ಯಾಯ ಮಾಡುವ ಮೂಲಕ ಜೀವನದಲ್ಲಿ ಬದಲಾವಣೆ ಕಾಣಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವಚನ ನೀಡಿದರು. ಪ್ರಾಚಾರ್ಯ ಅನ್ನದಾನಿ ಹಿರೇಮಠ ಮಾತನಾಡಿದರು. ಧಾರವಾಡ ಕೆಯುಡಿಗೆ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಗೊಂಡ ಡಾ.ಡಿ.ಸಿ.ಮಠ, ವಿಶಾಲಾ ಮಲ್ಲಾಪೂರ ಹಾಗೂ ಭಕ್ತಿಸೇವೆ ವಹಿಸಿಕೊಂಡ ಆರ್.ಬಿ.ಡಂಬಳಮಠ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಅನ್ನದಾನೀಶ್ವರ ಅಕ್ಕನ ಬಳಗದವರಿಂದ ಉಡಿ ಕಾರ್ಯಕ್ರಮ ಜರುಗಿತು. ಮಹಾಂತೇಶ ಗವಾಯಿಗಳು ಸಂಗೀತ ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲ್ಲಮಪ್ರಭು, ಮಹಾದೇವಿ ಅಕ್ಕನವರ ಹಾಗೂ ವೆಂಕಟಾಪೂರ ಪೂಜ್ಯರ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ಡಾ.ಬಿ.ಜಿ.ಜವಳಿ ಪ್ರಾಸ್ತವಿಕವಾಗಿ ಮಾತನಾಡಿದರು. ಡಾ.ಸಂತೋಷ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು.