ಲೋಕದರ್ಶನ ವರದಿ
ಗೊಂದಲದ ಗೂಡಾದ ಪುರಸಭೆ ಅವಿಶ್ವಾಸ ಗೊತ್ತುವಳಿ ಸಭೆ
ಸಿಂದಗಿ 18: ಪಟ್ಟಣದ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರು ಸದಸ್ಯರ ಗಮನಕ್ಕೆ ತರದೇ ಯಾವುದೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು 16 ಜನ ಸದಸ್ಯರು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದರ ಹಿನ್ನಲೆ ಎ. 16 ರಂದು ಸಾಮಾನ್ಯ ಸಭೆ ಕರೆಯಲಾಗಿತ್ತು. ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಮಂಡನೆ ಆದರೂ ಕೂಡಾ ಪುರಸಭೆ ಮುಖ್ಯಾಧಿಕಾರಿ ಎಸ್ ರಾಜಶೇಖರ ಅವರು ತಡವಾಗಿ ಪ್ರಕಟಿಸಿದ್ದು ಜನರಲ್ಲಿ ಗೊಂದಲ ಸೃಷ್ಟಿಸಿದೆ.
ಪುರಸಭೆ ಮುಖ್ಯಾಧಿಕಾರಿ ಎಸ್ ರಾಜಶೇಖರ ಮಾಧ್ಯಮದವರೊಂದಿಗೆ ಮಾತನಾಡಿ, ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಆವಿಶ್ವಾಸ ಗೊತ್ತುವಳಿ ಕುರಿತು ಸಾಮಾನ್ಯ ಸಭೆ ಕರೆಯುವಂತೆ ಕಲಬುರ್ಗಿ ಉಚ್ಚ ನ್ಯಾಯಾಲಯದ ದ್ವಿತೀಯ ಶ್ರೇಣಿ ನ್ಯಾಯಾಧೀಶರ ಆದೇಶದ ಮೇರೆಗೆ 16ರಂದು ಸಭೆ ಕರೆಯಲಾಗಿತ್ತು. ಒಟ್ಟು 23 ಸದಸ್ಯರಲ್ಲಿ 20 ಜನ ಸದಸ್ಯರು ಮಾತ್ರ ಹಾಜರಾಗಿ 3 ಜನ ಸದಸ್ಯರು ಗೈರು ಉಳಿದಿದ್ದು ಅದರಲ್ಲಿ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ವಿರುದ್ಧ 15 ಮತಗಳು ಪರವಾಗಿ 5 ಮತಗಳು ಬಿದ್ದು ಅವಿಶ್ವಾಸ ನಿರ್ಣಯವಾಗಿ ಹಂಗಾಮಿ ಅಧ್ಯಕ್ಷರಾಗಿ ಹಣಮಂತ ಸುಣಗಾರ ಅವರು ನೇಮಕವಾಗಿದ್ದಾರೆ ಎನ್ನುವ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ರವಾನಿಸಲಾಗಿದ್ದು ಈ ಪ್ರಕರಣ ಸರ್ವೋಚ್ಚ ನ್ಯಾಯಾಲಯದ ಅಂಗಳದಲ್ಲಿರುವ ಕಾರಣ ಬಹಿರಂಗ ಪಡಿಸಲು ವಿಳಂಬವಾಗಿದೆ. ಇದೇ 23ರಂದು ಸರ್ವೋಚ್ಚ ನ್ಯಾಯಾಲಯದ ವಿಚಾರಣೆಯಿದ್ದು ಪುರಸಭೆಯ ವಕೀಲರ ಸಲಹೆ ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಂಗಾಮಿ ಅಧ್ಯಕ್ಷ ಹಣಮಂತ ಸುಣಗಾರ, ಸದಸ್ಯರಾದ ಭಾಷಾಸಾಬ ತಾಂಬೋಳಿ, ಗೊಲ್ಲಾಳ ಬಂಕಲಗಿ, ಸದಸ್ಯರ ಪ್ರತಿನಿಧಿಗಳಾದ ಶರಣಪ್ಪ ಸುಲ್ಪಿ, ಸೈಪನ ನಾಟಿಕಾರ, ಸಿಬ್ಬಂದಿ ಸಿದ್ದು ಅಂಗಡಿ, ಸಿನೇಟರಿ ಅಧಿಕಾರಿ ನಬಿರಸೂಲ ಉಸ್ತಾದ ಇದ್ದರು.