ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ: ಮನಗೂಳಿ

The service of ASHA workers is commendable: Managooli

ಸಿಂದಗಿ 02: ಅಲ್ಪ ಮಾಸಿಕ ಗೌರವಧನ ಪಡೆದು ಸಮಾಜವನ್ನು ರೋಗಮುಕ್ತವಾಗಿಸಲು ಶ್ರಮಿಸುವಲ್ಲಿ, ನೈರ್ಮಲ್ಯ, ಶೌಚಾಲಯ ನಿರ್ಮಾಣ ಸೇರಿದಂತೆ ಸರಕಾರದ ವಿವಿಧ ಕಾರ್ಯಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ ಎಂದು ಇನ್ನರ್ವಿಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ  ಹೇಳಿದರು.  

ಪಟ್ಟಣದ ಓಂಶಾಂತಿ ಭವನದಲ್ಲಿ ಶನಿವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಆಶಾ ಕಾರ್ಯಕರ್ತೆಯರಿಗಾಗಿ 4 ದಿನಗಳ ಕಾಲ ವೃತ್ತಿ ಕೌಶಲ್ಯ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಆಶಾ ಕಾರ್ಯಕರ್ತೆಯರು ಸಮಾಜದಲ್ಲಿ ತಾಯ್ತನದ ಕೊಂಡಿಯಂತೆ ಕೆಲಸ ಮಾಡುತ್ತಿದ್ದಾರೆ. ಹಳ್ಳಿಯಲ್ಲಿ ಆಶಾ ಕಾರ್ಯಕರ್ತೆಯರಿದ್ದರೆ, ಅಲ್ಲಿ ಆಸ್ಪತ್ರೆ ತೆರೆದಂತಿರುತ್ತದೆ. ಕೆಲಸದ ಅವಧಿಯು ಕೇವಲ 2 ತಾಸು ಇದ್ದರೂ ಸಹ ದಿನವೀಡೀ ಶ್ರಮಿಸುವ ಕಾರ್ಯಕರ್ತೆಯರಿಗೆ ಮಾಸಿಕ ಗೌರವಧನ ಕಡಿಮೆಯಿದ್ದರೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. 

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಹಾಗೂ ತಾಲೂಕಾ ಆರೋಗ್ಯ ಇಲಾಖೆ ಅವರು ಆಶಾಕಾರ್ಯಕರ್ತೆಯರಿಗೆ 4 ದಿನಗಳ ಕಾಲ ವೃತ್ತಿ ಕೌಶಲ್ಯ ತರಬೇತಿ ಶಿಬಿರ ಹಮ್ಮಿಕೊಂಡಿದ್ದು ಅರ್ಥಪೂರ್ಣವಾಗಿದೆ. ಸಮಾಜ ಸೇವೆಯಲ್ಲಿ ತೊಡಗಿರುವ ಆಶಾಕಾರ್ಯಕರ್ತೆಯರು ವೃತ್ತಿ ಕೌಶಲ್ಯದ ತರಬೇತಿ ಪಡೆಯುವ ಜೊತೆಗೆ ಇಲ್ಲಿ ನೀಡುವ ಈಶ್ವರೀಯ ಜ್ಞಾನ ಪಡೆದುಕೊಳ್ಳ ಬೇಕು. ನೆಮ್ಮದಿಯ ಜೀವನ ಪಡೆಯುವಲ್ಲಿ ಈಶ್ವರೀಯ ಜ್ಞಾನ ಮಹತ್ವದ್ದಾಗಿದೆ ಎಂದು ಹೇಳಿದರು. 

ಇಂದಿನ ಒತ್ತಡದ ಬದುಕಿನಲ್ಲಿ ಆಧ್ಯಾತ್ಮ ಮತ್ತು ಜ್ಞಾನ ಎರಡು ಅಗತ್ಯವಿದ್ದು, ಸಕಾರಾತ್ಮಕ ವಿಚಾರಗಳನ್ನು ರೂಪಿಸಿಕೊಂಡಾಗ ಮಾತ್ರ ಆರೋಗ್ಯದಿಂದ ಮತ್ತು ಸಂತೋಷದಿಂದ ಬುಕಲು ಸಾಧ್ಯವಾಗುತ್ತದೆ. ಆದ್ದರಿಂದ ನಾವು ಜೀವನದಲ್ಲಿ ಸಂತೋಷದಿಂದ ಈರಲು ಈಶ್ವರೀಯ ಜ್ಞಾನ ಅಗತ್ಯವಿದೆ ಎಂದು ಹೇಳಿದರು. 

ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಚಿನ ಉಟಗಿ ಮಾತನಾಡಿ, ತೋಟಗಾರಿಕೆ ಅಂದರೆ ಪರಿಸರ. ಪರಿಸರ ಎಂದರೆ ಆಧ್ಯಾತ್ಮ. ತೋಟಗಾರಿಕೆಗೂ ಆಧ್ಯಾತ್ಮಕ್ಕೂ ಸಂಬಂಧವಿದೆ. ಒಬ್ಬ ರೈತ ಹೊಲದಲ್ಲಿ ಶೃದ್ಧೆಯಿಂದ ಕೆಲಸ ಮಾಡುವ ಜೊತೆಗೆ ಗಿಡಗಂಟಿಗಳನ್ನು ಬೆಳೆಸುತ್ತಾನೆ. ಅಲ್ಲಿ ಅವನ ಏಕಾಗ್ರತೆಯ ಶ್ರಮ ಅಡಗಿದೆ. ಇದರಲ್ಲಿ ಆಧ್ಯಾತ್ಮವಿದೆ. ಈಶ್ವರೀಯ ವಿಶ್ವವಿದ್ಯಾಲಯವು ಜನತೆಗೆ ಈಶ್ವರೀಯ ಜ್ಞಾನ ನೀಡುವ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದೆ. ಅವರು ಇಂದು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಆಶಾ ಕಾರ್ಯಕರ್ತೆಯರಿಗೆ ವೃತ್ತಿ ಕೌಶಲ್ಯ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. 

ಬಾಗಲಕೋಟೆ ಸೇವಾ  ಕೇಂದ್ರದ ಸಂಚಾಲಕಿ ರಾಜಯೋಗಿನಿ  ಬಿ.ಕೆ. ನಾಗರತ್ನ ಅಕ್ಕನವರು, ಅಲಮೇಲ ಸೇವಾ ಕೇಂದ್ರದ ಸಂಚಾಲಕಿ  ರಾಜಯೋಗಿನಿ ಬಿ.ಕೆ. ರೇಣುಕಾ ಅಕ್ಕನವರು ಮಾತನಾಡಿ, ವರ್ತಮಾನ ಕಾಲದಲ್ಲಿ ಆರೋಗ್ಯ, ಸಂಪತ್ತು, ಸಂತೋಷ ಮುಖ್ಯ. ಆದರೆ ಇಂದು ಒಂದಿಲ್ಲ ಒಂದು ಕೊರತೆಯಿಂದ ಜನತೆ ಜೀವನ ನಡೆಸುತ್ತಿದ್ದಾರೆ. ಇಂದ ನಮಗೆ ಈಶ್ವರೀಯ ಜ್ಞಾನ ಅಗತ್ಯವಿದೆ. ಪರಮಾತ್ಮನ ಶಕ್ತಿ ನಮ್ಮಲ್ಲಿದ್ದರೆ ಜಗತ್ತು ನಮ್ಮನ್ನು ನೋಡುತ್ತದೆ ಎಂದು ಹೇಳಿದರು. 

ಸಿಂದಗಿ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬಿ.ಕೆ. ಪವಿತ್ರಾ ಅಕ್ಕನವರು, ಎಂ.ಕೆ. ಹುಬ್ಬಳ್ಳಿ ಸೇವಾ ಕೇಂದ್ರ ಸಂಚಾಲಕಿ ರಾಜಯೋಗಿನಿ ಬಿ.ಕೆ. ಜ್ಯೋತಿ ಅಕ್ಕನವರು, ಹುಬ್ಬಳ್ಳಿಯ ರಾಜಯೋಗಿನಿ ಬಿ.ಕೆ. ಗಾಯತ್ರಿ ಅಕ್ಕನವರು, ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಸರೋಜಿನಿ ಪೊದ್ಧಾರ ವೇದಿಕೆ ಮೇಲಿದ್ದರು.  

ಎಸ್‌.ವೈ. ಬಿರಾದಾರ, ಎಂ.ಎಂ. ದೊಡ್ಡಮನಿ, ಕೆ.ಎಸ್‌. ಪತ್ತಾರ, ಐಶ್ವರ್ಯ ನಾಯಕ, ತಾನಾಜಿ ಕನ್ಸೆ, ವಿಜಯಕುಮಾರ ತೇಲಿ,  ವಿಜಯಕುಮಾರ ಪತ್ತಾರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ 200 ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.