ಕನ್ನಡ ಮಾಧ್ಯಮದಲ್ಲಿ ಕಲಿತವರಿಗೂ ಸಾಕಷ್ಟು ಅವಕಾಶಗಳುಂಟು: ಚಾಟೆ

There are plenty of opportunities for those who studied in Kannada medium: Chate

ಬೆಳಗಾವಿ 19: ಕನ್ನಡ ಮಾಧ್ಯಮದಲ್ಲಿ ಓದಿದರೆ ಹೆಚ್ಚಿನ ಭವಿಷ್ಯವಿಲ್ಲವೆಂಬ ತಪ್ಪು ಕಲ್ಪನೆಯಲ್ಲಿ ಜನರಿದ್ದಾರೆ. ಮಾತೃಭಾಷೆಯಲ್ಲಿ ಕಲಿತ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಗೌರವದ ಜೀವನ ನಡೆಸುತ್ತಿರುವ ಸಾಕಷ್ಟು ಜನರನ್ನು ನಾವು ಇಂದು ಕಾಣುತ್ತಿದ್ದೇವೆ. ಇದಕ್ಕೆ ಪಾಲಕರ ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು ಶೈಲಜಾ ಚಾಟೆ ಹೇಳಿದರು.  

ಇತ್ತೀಚೆಗೆ ಚೆನ್ನಮ್ಮ ನಗರದ ಸತ್ಯ ಪ್ರಮೋದ ಸಭಾಗೃಹದಲ್ಲಿ ಬ್ರಾಹ್ಮಣ ಜನ ಜಾಗೃತಾ ಸಂಘಟನೆಯವರು ಹಮ್ಮಿಕೊಂಡಿದ್ದ ಸಂಘಟನೆಯ 16ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಗಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. 

ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಯನ್ನು ಮಾಡಿರುವ ಸತೀಶ ಕುಲಕರ್ಣಿ (ಕೃಷಿ), ಶೈಲಜಾ ಚಾಟೆ (ಶಿಕ್ಷಣ), ಕವಿತಾ ಮಜಲಿಕರ (ಸಮಾಜ) ಹಿರಿಯ ನಾಗರಿಕರಾದ ಎಂ. ಆರ್‌. ಕುಲಕರ್ಣಿ, ಡಾ. ಪ್ರಕಾಶರಾವ ಜಂಬಗಿ ಮತ್ತು ಎಸ್‌. ಎ. ಕಾನಿಟ್ಕರ್ ಇವರನ್ನು ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.  

2023-24 ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಪ್ರತಿಶತ 95 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿ, ವಿರ್ದಾರ್ಥಿನಿಯರಾದ ಜಾನವಿ ಅಮೋಲ ಜೋಶಿ, ನಿಧಿ ಚಿದಂಬರ ಗ್ರಾಮೋಪಾಧ್ಯ, ಆದಿತಿ ಅಮಿತ ಕುಲಕರ್ಣಿ ಅಲ್ಲದೇ ಕ್ರೀಡೆ ಇತರೆ ಚಟುವಟಿಗಳಲ್ಲಿ ಸಾಧನೆಗೈದಿರುವ ಶ್ರಾವ್ಯಾ ಎಲ್‌. ಭಟ್, ಸಾನ್ವಿ ಕುಲಕರ್ಣಿ, ಈಶ್ವರಿ ಕುಲಕರ್ಣಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.   

ಅಧ್ಯಕ್ಷತೆಯನ್ನು ಗಣಪತಿ ರಾವ್ ವಹಿಸಿದ್ದರು. ಸತೀಶ ಕುಲಕರ್ಣಿ, ಕವಿತಾ ಮಜಲಿಕರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಲತೇಶ ಪಾಟಿಲ ಆಗಮಿಸಿದ್ದರು. ಗೀತಾ ರಾವ್, ರಾಜಶ್ರೀ ಜಮ್ಮಿಹಾಳ ಪ್ರಾರ್ಥಿಸಿದರು. ಕಾರ್ಯದರ್ಶಿ ಗುರುರಾಜ ಮನಗೂಳಿ ಸ್ವಾಗತಿಸಿದರು. ಖಜಾಂಚಿಗಳಾದ ಸುಜೀತ ಜೋಶಿ ವಂದಿಸಿದರು. ಶಿಲ್ಪಾ ಕುಲಕರ್ಣಿ ಮತ್ತು ಮೇಧಾ ಕುಲಕರ್ಣಿ ನಿರೂಪಿಸಿದರು.  

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ರಾವ ಮತ್ತು ಸಂಗಡಿಗರಿಂದ ಭರತನಾಟ್ಯ ಜರುಗಿತು.