ಡಿಎಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಕಾಂಪ್ಲೆಕ್ಸ್‌ ರಸಗೊಬ್ಬರ ಬಳಸಿ: ಶಿವಪ್ರಕಾಶ ಪಾಟೀಲ ಸಲಹೆ

Use complex fertilizer as an alternative to DAP fertilizer: Shivaprakash Patil suggests

ಸವದತ್ತಿ 25: ಗುಣಮಟ್ಟದ ಕೃಷಿ ಪರಿಕರ, ಬೀಜ, ಗೊಬ್ಬರ ರೈತರಿಗೆ ಸಕಾಲಕ್ಕೆ ಮತ್ತು ಸರ್ಕಾರ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡಬೇಕೆಂದು ಕೃಷಿ ಇಲಾಖೆಯ ವಿಷಯ ತಜ್ಞ ಸಿ. ಐ.ಹೂಗಾರ ಅವರು ಮಾರಾಟಗಾರರಿಗೆ ಸೂಚಿಸಿದರು. 

ಇಲ್ಲಿನ ತಾಲೂಕು ಪಂಚಾಯತ್ ಸಭಾಭವನದಲ್ಲಿಕೃಷಿ ಪರಿಕರ ಮಾರಾಟಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಕೃಷಿ ಪರಿಕರಗಳ ಕೊರತೆಯಾಗದಂತೆ ಮಾರಾಟಗಾರರು ಜಾಗ್ರತೆ ವಹಿಸಬೇಕು. ಗುಣಮಟ್ಟದ ಪರಿ ಕರಗಳನ್ನು ಮಾರಾಟ ಮಾಡಿ. ಇದರಿಂದ ರೈತರು ಉತ್ತಮ ಇಳುವರಿ ಪಡೆಯಲು ಸಾಧ್ಯವಾಗಲಿದೆ. ನಾವು ರೈತರ ಬದುಕನ್ನು ಕಟ್ಟಿ ಕೊಡುವಂತಾಗಬೇಕೆಂದರು.   ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ ಮಾತನಾಡಿ, ಮಾರಾಟಗಾರರು ಯಾವುದೇ ಸಮಸ್ಯೆ ಬಾರದಂತೆ ಗುಣಮಟ್ಟದ ಗೊಬ್ಬರ ಹಾಗೂ ಬೀಜಗಳನ್ನು ರೈತರಿಗೆ ಪೂರೈಸಿ ರಸೀದಿ ನೀಡಬೇಕು. ಕಳಪೆ ಪರಿಕರ ಮತ್ತು ಬೀಜ, ಗೊಬ್ಬರ ಪೂರೈಸುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.   

ರೈತರು ರಸಗೊಬ್ಬರವನ್ನು ಕೇವಲ ಒಂದೇ ರಸಗೊಬ್ಬರಕ್ಕೆ ಆದ್ಯತೆ ನೀಡದೆ, ಡಿ.ಎ.ಪಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಗಂಧಕ ಒದಗಿಸುವ 20.20.0.13 ಹಾಗೂ ರೋಗನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಪೊಟ್ಯಾಷ್ ಯುಕ್ತ ರಸಗೊಬ್ಬರಗಳಾದ 10:26:26, 14:35:14, 17:17:17, 19:19:19, 20:10:10 ಸೇರಿದಂತೆ ಇತರೆ ಕಾಂಪ್ಲೆಕ್ಸ್‌ ರಸಗೊಬ್ಬರಗಳನ್ನು ಬಳಸಿ ಉತ್ತಮ ಇಳುವರಿ ಹಾಗೂ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಂತೆ ರೈತರಲ್ಲಿ ವಿನಂತಿಸಿದರು. 

ಈ ವೇಳೆ ಕೃಷಿ ಪರಿಕರ ಮಾರಟಗಾರರ ಸಂಘದ ಅಧ್ಯಕ್ಷ ಅರುಣ ಬಾಳಿ, ಕೃಷಿ ಅಧಿಕಾರಿಗಳಾದ ಎಂ.ಐ. ಅತ್ತಾರ , ಆರ್‌. ಜಿ. ಕೋಲಕಾರ, ಬಿ. ಆರ್‌. ಪೂಜಾರ, ಎಸ್‌. ಎಲ್‌. ದೇಸಾಯಿ, ಸಿ. ಜಿ.ಬಂಗೆಣ್ಣವರ, ಬಸವರಾಜ ಬಿರುಕಲ, ಮಹೇಶ ಜೈನರ ಸೇರಿ ಸಿಬ್ಬಂದಿ, ಪರಿಕರ ಮಾರಾಟಗಾರರು ಇದ್ದರು.