ವಿಜಯಪುರ: ಸಂವಿಧಾನ ಭಾರತದ ರಕ್ಷಾ ಕವಚ: ಜಯಮೃತ್ಯುಂಜಯ ಶ್ರೀ

ಲೋಕದರ್ಶನ ವರದಿ

ವಿಜಯಪುರ 14: ಸಂವಿಧಾನ ಎಂದರೆ ಭಾರತದ ರಕ್ಷಾ ಕವಚ. ನಮ್ಮ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ಗಡಿಯಲ್ಲಿ ನಮ್ಮ ಪ್ರಾಣವನ್ನು ರಕ್ಷಣೆ ಮಾಡಿದರೆ, ದೇಶದಲ್ಲಿ ಪ್ರತಿಯೊಬ್ಬರ ಸಾಮಾಜಿಕ ಬದುಕನ್ನು ರಕ್ಷಣೆ ಮಾಡುತ್ತಿರುವುದು ಸಂವಿಧಾನ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ನುಡಿದರು.   

    ಸೋಮವಾರ  ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ ವಾದ) ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ `ಸರ್ವಜನರ ಸಂವಿಧಾನ' ಸಮಾವೇಶದ ಸಾನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು, ಸಮಸ್ತ ಭಾರತೀಯರ ಉದ್ಧಾರಕ್ಕಾಗಿ ಇರುವ ಏಕೈಕ ಗ್ರಂಥ ಸಂವಿಧಾನ, ಧರ್ಮಗ್ರಂಥಕ್ಕೆ ನೀಡುವ ಗೌರವವನ್ನು ಭಾರತೀಯ ಸಂವಿಧಾನಕ್ಕೆ ನೀಡಬೇಕು ಎಂದರು. 

   ಮನುವಾದಿ ಸಂತತಿಯವರು ಭಾರತೀಯ ಸಂವಿಧಾನವನ್ನು ದಹಿಸುವ ಮೂಲಕ ಸಂವಿಧಾನದ ಆಶಯವನ್ನು ನಾಶ ಮಾಡುವ ಹುನ್ನಾರದಲ್ಲಿ ತೊಡಗಿದ್ದಾರೆ. ಈ ಹುನ್ನಾರವನ್ನು ತಡೆಗಟ್ಟಿ ಪ್ರತಿರೋಧವನ್ನು ಒಡ್ಡಬೇಕಿದೆ ಎಂದರು.

         ದೇಶದಲ್ಲಿ ಶೋಷಿತ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳಿಗೆ ಮೀಸಲಾತಿ, ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ, ದುಡಿಯುವ ಕೈಗಳಿಗೆ ಉದ್ಯೋಗ ದೊರಕಿರುವುದು ಪೂಜಾರಿ ಹಾಗೂ ಪಂಡಿತರ ಪ್ರಯತ್ನದಿಂದ ಅಲ್ಲ, ಅದು ದೊರಕಿದ್ದು ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ನೀಡಿದ ಸಂವಿಧಾನದಿಂದ ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.

   ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ಪ್ರೊ.ರಾಜು ಆಲಗೂರ ಮಾತನಾಡಿ, ದೇಶದಲ್ಲಿ ಸಮಾನತೆ ಎಂಬುದು ಸಂಪೂರ್ಣವಾಗಿ ನೆಲೆಯೂರಿ, ಪ್ರತಿಯೊಬ್ಬರು ಘನತೆಯಿಂದ ಬದುಕು ಕಟ್ಟಿಕೊಂಡಾಗ ಮಾತ್ರ ವಂದೇ ಮಾತರಂ ಹಾಗೂ ಭಾರತ ಮಾತಾ ಕೀ ಜೈ ಎಂಬ ಘೋಷಣೆಗಳಿಗೆ ನೈಜ ಅರ್ಥಬರುತ್ತದೆ. ಭಾರತೀಯ ಸಂವಿಧಾನ ಎಂದೂ ಬದಲಾಗಲು ಸಾಧ್ಯವಿಲ್ಲ, ಕೆಲವೊಂದು ಬುದ್ಧಿಗೇಡಿಗಳು ಭಾರತೀಯ ಸಂವಿಧಾನ ಬದಲಾವಣೆ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಭಾರತೀಯ ಸಂವಿಧಾನ ಬದಲಾವಣೆಯ ಪ್ರಯತ್ನ ನಡೆದರೆ ರಕ್ತಕ್ರಾಂತಿಯಾಗುವುದಂತೂ ಸತ್ಯ ಎಂದು ಎಚ್ಚರಿಸಿದರು. 

ಪ್ರೊ.ಲಕ್ಷ್ಮೀದೇವಿ ಆಲಕೋಡ ವಿಶೇಷ ಉಪನ್ಯಾಸ ನೀಡಿದರು. ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ, ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ಜಿತೇಂದ್ರ ಕಾಂಬಳೆ, ಮುಖಂಡರಾದ ಸಂಜು ಕಂಬಾಗಿ, ಶಿವು ಮೇಲಿನಮನಿ, ದಲಿತ ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು, ಶಂಕರ ಚಲವಾದಿ, ಚಂದ್ರು ದ್ಯಾಬೇರಿ ಮುಂತಾದವರು ಉಪಸ್ಥಿತರಿದ್ದರು.