ವಿಜಯಪುರ: ಗಾಂಧೀಜಿಯವರ ವಿಚಾರಗಳು ವಿಚಾರ ಸಂಕಿರಣ ಉದ್ಘಾಟನೆ

ಲೋಕದರ್ಶನ ವರದಿ

ವಿಜಯಪುರ 15: ಗಾಂಧೀಜಿ ಅವರು ನಮ್ಮೆಲ್ಲರಿಗೂ ಅತ್ಯುತ್ತಮವಾದ ವಿಚಾರಗಳನ್ನು ನೀಡಿ ಹೋದ ಮಹಾತ್ಮರು. ಅವರ ಸಂದೇಶಗಳೇ ನಮ್ಮ ಬದುಕಿಗೆ ದಾರಿ ದೀಪ. ನಮ್ಮ ಇಡೀ ಜೀವನ ವಿಚಾರಧಾರೆಗಳಿಗೆ ಪ್ರಸ್ತುತವಾದ ಗಾಂಧೀಜಿಯವರು ನನ್ನ ಬದುಕೇ ನನ್ನ ಸಂದೇಶ ಎಂದು ಹೇಳುವ ಮೂಲಕ ತಮ್ಮ ಜೀವನವನ್ನೇ ನಮ್ಮೆಲ್ಲರಿಗೂ ಸಂದೇಶವಾಗಿ ಉಳಿಯುವಂತೆ ಬದುಕಿ ತೋರಿಸಿದವರು ಎಂದು ಧಾರವಾಡದ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವ ಕುಲಕಣರ್ಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಜ್ಞಾನಶಕ್ತಿ ಆವರಣದಲ್ಲಿರುವ ಕನ್ನಡ ಭವನದಲ್ಲಿ ವಿವಿಯ ಗಾಂಧಿ ಅಧ್ಯಯನ ಕೇಂದ್ರ, ಎನ್ಎಸ್ಎಸ್ ಕೋಶ ಹಾಗೂ ಅಜೀಂ ಪ್ರೇಮ್ಜೀ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ "ಶಿಕ್ಷಣ ಮತ್ತು ಅಭಿವೃದ್ಧಿಯ ಕುರಿತು ಗಾಂಧೀಜಿಯವರ ವಿಚಾರಗಳು" ಎಂಬ ವಿಷಯದ ಕುರಿತು ರವಿವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ನಮ್ಮ ಜೀವನದ ಪ್ರತಿ ಹಂತಕ್ಕೂ ಪ್ರಸ್ತುತವಾಗುತ್ತಾರೆ. ನಾವೆಲ್ಲರೂ ಇಂದು ಓಟದ ಬದುಕನ್ನ ನಡೆಸುತ್ತಾ ಸ್ವಾರ್ಥ ಜೀವನವನ್ನು ನಡೆಸುತ್ತಿದ್ದೇವೆ. ನಮ್ಮ ಆಶೆ, ಆಮಿಷಗಳಿಗೆ ನಮ್ಮ ಸುತ್ತಲಿರುವ ಸುಂದರ ವಾತಾವರಣವನ್ನು ಹಾಳು ಮಾಡುತ್ತಿದ್ದೇವೆ. ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಲು ಜಗತ್ತಿನಾದ್ಯಂತ ಇರುವ ಜ್ಞಾನಿ, ತತ್ವಜ್ಞಾನಿ, ಚಿಂತಕರೆಲ್ಲ ಗಾಂಧೀಜಿಯವರ ವಿಚಾರಧಾರೆ, ಪ್ರಯೋಗಗಳು ನಮಗೇನಾದರೂ ಪರಿಹಾರ ನೀಡಬಹುದೇ ಎಂಬುವುದನ್ನು ಹುಡುಕುತ್ತಿದ್ದಾರೆ ಎಂದರು.

ವಿವಿಯ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ತಹಮೀನಾ ಕೋಲಾರ, ಹೊಪೇಟೆ ಲೇಖಕ ಡಾ.ನಾಗಣ್ಣ ಕಿಲಾರಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ವಿವಿಧ ಶಾಲಾ ಶಿಕ್ಷಕರು, ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. 

ರಾಮಕೃಷ್ಣ ಭಟ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್ಜೀ ಫೌಂಡೇಷನ್ನ ಸದಸ್ಯ ಓಂ ಪ್ರಕಾಶ ವಂದಿಸಿ, ನಿರೂಪಿಸಿದರು.