ಇಂಥಹ ಮಕ್ಕಳು ನಮ್ಮ ಹೊಟ್ಟೆಯಲ್ಲಿಯೂ ಹುಟ್ಟಬೇಕಿತ್ತು ಎನ್ನುವಂತೆ ಸಾಧನೆ ಮಾಡಬೇಕು: ಬಬಲೇಶ್ವರ

We should strive to make such children as if they were meant to be born in our wombs: Babaleshwar

ವಿಜಯಪುರ 21; ಮಕ್ಕಳು ಎಷ್ಟು ಅಂಕಗಳನ್ನು ಪಡೆದರು ಎನ್ನುವುದಕ್ಕಿಂತ ಹೆತ್ತವರಿಗೆ ನೋವಾಗದಂತೆ ಹೇಗೆ ನಡೆದುಕೊಂಡರು ಎನ್ನುವುದು ಬಹು ಮುಖ್ಯವಾಗುತ್ತದೆ. ಒಂದು ಅಂಕ ಕಡಿಮೆ ಬಂದರೆ ಪರವಾಗಿಲ್ಲ ಮುಂದಿನ ಬಾರಿ ಅದರ ಎರಡರಷ್ಟು ಅಂಕಗಳನ್ನು ಪಡೆದುಕೊಳ್ಳಬಹುದು. ಆದರೆ ಒಂದು ಬಾರಿ ಹೆತ್ತವರಿಗೆ ಸಂಕಟ ನೀಡಿದರೆ ಅದನ್ನು ಹತ್ತು ಜನ್ಮ ಎತ್ತಿದರೂ ತೀರಿಸುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಮಕ್ಕಳು ಮಾಡುವ ಸಾಧನೆ ಹೇಗಿರಬೇಕು ಎಂದರೆ ಸಾಧನೆ ಮಾಡಿದ ಮಕ್ಕಳನ್ನು ನೋಡಿದವರು ಇಂಥ ಮಕ್ಕಳು ನಮ್ಮ ಹೊಟ್ಟೆಯಲ್ಲಿಯೂ ಹುಟ್ಟಬೇಕಿತ್ತು ಎಂದುಕೊಳ್ಳಬೇಕು ಎನ್ನುವ ಹಾಗಿರಬೇಕು ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು. 

ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಸಲಾಗಿದ್ದ 2025-26 ನೇ ಸಾಲಿಗೆ ದಾಖಲಾತಿ ಪಡೆದುಕೊಂಡ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಬ್ರಿಡ್ಜಕೋರ್ಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಇಂದು ಮಕ್ಕಳಿಗೆ ಶಿಕ್ಷಣ ನೀಡುವುದ ಜೊತೆಗೆ ಸಂಸ್ಕಾರ ನೀಡುವ ಕಾರ್ಯ ನಡೆಯಬೇಕಿದೆ. ಆ ಕಾರ್ಯವನ್ನು ಎಕ್ಸಲಂಟ್ ಕಾಲೇಜು ಮೊದಲಿನಿಂದಲೂ ಮಾಡಿಕೊಂಡು ಬಂದಿದೆ. ಆ ಕಾರಣದಿಂದಾಗಿಯೇ ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ ಮಾಡುವುದರೊಂದಿಗೆ ತಮ್ಮತನವನ್ನು ಸಾಬೀತು ಮಾಡಿ ಹೆತ್ತವರ ಕನಸನ್ನು ಈಡೇರಿಸಿದ್ದಾರೆ. ಸೇತುಬಂಧ ಕಾರ್ಯಕ್ರಮದಿಂದ ವಿಜ್ಞಾನದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಅವುಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬೇಕು ಎನ್ನುವುದರ ಕುರಿತು ಸ್ಪಷ್ಟ ಮಾಹಿತಿ ದೊರೆಯುತ್ತದೆ ಎಂದು ಹೇಳಿದರು; ಮುಂದುವರಿದು ಹೇಳಿದ ಅವರು ಇಂದು ಇಟ್ಟ ಈ ದಿಟ್ಟ ಹೆಜ್ಜೆ ಮುಂದೊಂದು ದಿನ ಮಾಧ್ಯಮದವರು ತಮ್ಮ ಮನೆಯ ಮುಂದೆ ತಮ್ಮನ್ನು ಸಂದರ್ಶನ ಮಾಡುವುದಕ್ಕೆ ಬಂದು ನಿಂತಾಗ ಮಾತ್ರ ಅದು ಯಶಸ್ವಿಯಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಬೇಕು ಎಂದು ಹೇಳಿದರು. 

ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಬಿ.ಎಂ ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಪ್ಲಾಸ್ಟಿಕ್ ಸರ್ಜರಿ ಶಸ್ತ್ರಚಿಕಿತ್ಸಕ ಡಾ. ವಿಜಯಕುಮಾರ ಹುಡೆದ; ಅಂಕಗಳ ಜೊತೆ ಯಾವತ್ತು ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದಕ್ಕೆ ಹೋಗಬಾರದು. ಬದಲಿಗೆ ನಾನೆಷ್ಟು ಅಂಕಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದೇನೆ ಎನ್ನುವುದನ್ನು ಕಂಡುಕೊಂಡು ಅದರೆಡೆಗೆ ಹೆಜ್ಜೆ ಹಾಕಬೇಕು. ಕಷ್ಟ ಪಡದ ಹೊರತು ಸುಖ ಸಿಗುವುದಕ್ಕೆ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಅರಿತುಕೊಂಡು ವಿದ್ಯಾರ್ಥಿಗಳು ಮುನ್ನಡೆದಾಗ ಮಾತ್ರ ಮುಂದೊಂದು ದಿನ ಒಳ್ಳೆಯ ದಿನಗಳು ನಿಮ್ಮನ್ನು ಅರಸಿಕೊಂಡು ಬರುತ್ತವೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು. ಪಠ್ಯವನ್ನು ಓದುವುದಕ್ಕಾಗಿ ವೇಳಪಟ್ಟಿಯನ್ನು ಮಾಡಿಕೊಳ್ಳದೆ ಪಠ್ಯದ ಹೊರತಾಗಿ ಮಾಡುವ ಕೆಲಸಗಳಿಗೆ ವೇಳಾಪಟ್ಟಿ ಮಾಡಿಕೊಳ್ಳಬೇಕು. ಇದರರ್ಥ ವಿದ್ಯಾರ್ಥಿಗಳು ಕೆಲಸ ಬರೀ ಅಧ್ಯಯನ ಎನ್ನುವ ಸತ್ಯವನ್ನು ಒಪ್ಪಿಕೊಂಡು ಇಂದಿನಿಂದಲೇ ಹೆಜ್ಜೆ ಹಾಕಬೇಕು ಎಂದು ಹೇಳಿದರು. 

ಇನ್ನೋರ್ವ ಅಥಿತಿ ಜೆಎಸ್‌ಎಸ್ ಆಸ್ಪತ್ರೆಯ ಆಪರೇಷನಲ್ ಹೆಡ್ ವೀರಣ್ಣ ಜುಮನಾಳಮಠ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಅವರು ಕೇವಲ ಬಾಯಿಪಾಠ ಮಾಡಿಕೊಂಡು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳದೇ ಇಡೀ ಪಠ್ಯವನ್ನು ಅರ್ಥೈಸಿಕೊಂಡು ಪರೀಕ್ಷೆ ಎದುರಿಸಬೇಕು. ಅಂಕಗಳ ಜೊತೆಯಲ್ಲಿ ಪರೀಪೂರ್ಣ ಜ್ಞಾನ ಹೊಂದಿದವನು ಮಾತ್ರ ಇಂದು ಯಶಸ್ವಿಯಾಗುತ್ತಾನೆ ಎಂದು ಹೇಳಿದರು. ಕುಮಾರಿ ಅಂಬಕ್ಕ ಭೋವಿ ಪ್ರಾರ್ಥಿಸಿದರು, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್ ಪ್ರಸ್ತಾವಿಕವಾಗಿ ಮಾತಾಡಿದರು, ಆಂಗ್ಲ ಉಪನ್ಯಾಸಕರಾದ ಶ್ರದ್ಧಾ ಜಾಧವ, ಮುಸ್ತಾಕ್ ಮಲಘಾಣ ಸ್ವಾಗತಿಸಿ ವಂದಿಸಿದರು.