ಪುಣೆ, ಅ 12: ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ದ್ವಿಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ಸಾಧನೆ ಮಾಡಿರುವುದು ಹೆಚ್ಚು ಸಂತಸ ನೀಡಿದೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಶುಕ್ರವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಕೊಹ್ಲಿ 254 ರನ್ ಗಳಿಸಿದ್ದರು. ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ದ್ವಿಶತಕ ಸಿಡಿಸಿದ ಭಾರತದ ಮೊದಲನೇ ಬ್ಯಾಟ್ಸ್ ಮನ್ ಎಂಬ ಮೈಲುಗಲ್ಲು ಸೃಷ್ಟಿಸಿದರು. ಒಟ್ಟಾರೆ, ಭಾರತ, ಪ್ರಥಮ ಇನಿಂಗ್ಸ್ನಲ್ಲಿ 601 ರನ್ ಕಲೆ ಹಾಕಿತ್ತು. ಬಿಸಿಸಿಐ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಕೊಹ್ಲಿ, ಭಾರತ ತಂಡದ ನಾಯಕನಾದ ಬಳಿಕ ಸಂಪೂರ್ಣವಾಗಿ ತಂಡದ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದೇನೆ. ನಾಯಕತ್ವ ವಹಿಸಿಕೊಳ್ಳುವ ಮೊದಲು ದೊಡ್ಡ ಮೊತ್ತ ಕಲೆಹಾಕುವಲ್ಲಿ ಎಡವುತ್ತಿದ್ದೆ. ಆದರೆ, ತಂಡದ ನಾಯಕನಾದ ಬಳಿಕ ನಾನು ಕಲ್ಪನೆ ಮಾಡಿಕೊಳ್ಳಲಾಗದಷ್ಟು ರನ್ ಗಳಿಸಲು ಸಾಧ್ಯವಾಗುತ್ತಿದೆ ಎಂದರು. ವೃತ್ತಿ ಜೀವನದಲ್ಲಿ ದಾಖಲಾಗಿರುವ ಏಳು ದ್ವಿಶತಕದಲ್ಲಿ ಯಾವುದು ನಿಮಗೆ ವಿಶೇಷ ಎಂಬ ಪ್ರಶ್ನೆಗೆ ಉತ್ತರಿಸಿ, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧದ ಗಳಿಸಿದ 200 ರನ್ಗಳು ನನ್ನ ನೆಚ್ಚಿನ ದ್ವಿಶತಕಗಳಾಗಿವೆ ಎಂದು ಹೇಳಿದರು. ಒಟ್ಟಾರೆ, ಖುಷಿಯಾಗಿದ್ದೇನೆ. ಈ ಪಂದ್ಯದಲ್ಲಿ ನಾವು ಮೇಲುಗೈ ಸಾಧಿಸಿದ್ದೇವೆ. ಅಂಟಿಗುವಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸಿಡಿಸಿದ ದ್ವಿಶತಕ ಹಾಗೂ ಮುಂಬೈನಲ್ಲಿ ಇಂಗ್ಲೆಂಡ್ ವಿರುದ್ಧ ಸಿಡಿಸಿದ ದ್ವಿಶತಕ ನನ್ನ ಪಾಲಿಗೆ ವಿಶೇಷ ಎಂದು ಕೊಹ್ಲಿ ತಿಳಿಸಿದರು. ಇವರ ದ್ವಿಶಕದ ಜತೆಗೆ ರವೀಂದ್ರ ಜಡೇಜಾ ಅವರೊಂದಿಗೆ 225 ರನ್ ಜತೆಯಾಟವಾಡಿದ್ದರು. ಇದರ ಫಲವಾಗಿ 600 ರನ್ ಗಳಿಸಲು ಸಾಧ್ಯವಾಗಿತ್ತು. ನಂತರ, ಪ್ರಥಮ ಇನಿಂಗ್ಸ್ ಆರಂಭಿಸಿದ ಆಫ್ರಿಕಾ 36 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿ, " ಸಾಧ್ಯವಾದಷ್ಟು ಬೇಗ 600 ರನ್ ಗಳಿಸುವುದು ನಮ್ಮ ಯೋಜನೆಯಾಗಿತ್ತು. ಜಡೇಜಾ ಬ್ಯಾಟಿಂಗ್ ಅದ್ಭುತವಾಗಿತ್ತು. ಇವರ ಬ್ಯಾಟಿಂಗ್ ನಾನು ಸಾಮಾನ್ಯವಾಗಿ ಬ್ಯಾಟಿಂಗ್ ಮಾಡುವಂತೆ ಉತ್ತೇಜಿಸುತ್ತಿತ್ತು. ಇನ್ನೂ ನಮ್ಮ ಕಡೆ ವಿಕೆಟ್ಗಳು ಇದ್ದಿದ್ದರಿಂದ ಸಾಧ್ಯವಾದಷ್ಟು ಆಕ್ರಮಣಕಾರಿ ಆಟಕ್ಕೆ ಮೊರೆ ಹೋಗಲಾಗಿತ್ತು ಎಂದರು. ದ್ವಿಶತಕದ ಜತೆಗೆ ಕೊಹ್ಲಿ ವೃತ್ತಿ ಜೀವನದ 7000 ಟೆಸ್ಟ್ ಕ್ರಿಕೆಟ್ ರನ್ ದಾಖಲಿಸಿದರು. ಅಲ್ಲದೇ, ಅತಿ ಹೆಚ್ಚು ಬಾರಿ 150 ರನ್ ಗಳಿಸಿದ ವಿಶ್ವದ ಮೊದಲ ನಾಯಕ ಎಂಬ ದಾಖಲೆಗೆ ಭಾಜನರಾದರು. ಆ ಮೂಲಕ ಆಸ್ಟ್ರೇಲಿಯಾದ ಮಾಜಿ ನಾಯಕ ಡಾನ್ ಬ್ರಾಡ್ಮನ್ ದಾಖಲೆ ಮುರಿದರು.