ಲೋಕದರ್ಶನ ವರದಿ
ಬೆಳಗಾವಿ 18: ಹುಕ್ಕೇರಿ ಸ್ವಾಮೀಜಿಯವರ ಆರೋಗ್ಯ ಸೂತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸುವ ಜವಾಬ್ದಾರಿ ನನ್ನದು ಎಂದು ಕೇಂದ್ರ ಆಯುಷ್ ಇಲಾಖೆಯ ಸಚಿವ ಶ್ರೀಪಾದ ನಾಯಕ ಹೇಳಿದರು.
ಇತ್ತೀಚೆಗೆ ಗೋವಾ ರಾಜ್ಯದ ಬಿಚೋಲಿಯಲ್ಲಿ ಆರೋಗ್ಯ ಸೂತ್ರವನ್ನು ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದರು. ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಇವತ್ತು ಭಾರತವನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಬಹುದೊಡ್ಡ ಕಾರ್ಯಕ್ಕೆ ಕೈ ಹಾಕಿದ್ದಾರೆ. ಅದು ಯಶಸ್ವಿಯೂ ಆಗಿದೆ. ಇವತ್ತು ಹುಕ್ಕೇರಿ ಚಂದ್ರಶೇಖರ ಶಿವಾಚಾರ್ಯರ ಪ್ರೇರಣೆಯಿಂದ, ಡಾ. ವೆಂಕಟರಮಣ ಹೆಗಡೆ ಅವರ ಪರಿಕಲ್ಪನೆಯಲ್ಲಿ ಹೊರಬಂದಿರುವ 6,4,2,1,1 ಆರೋಗ್ಯ ಸೂತ್ರವನ್ನು ಮೋದಿಯವರಿಗೆ ಮುಟ್ಟಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ವಿಶ್ವ ಯೋಗ ದಿನಾಚರಣೆಯದಿನ ಮುಕ್ತವಾಗಿ ಎಲ್ಲರಿಗೂ ಕೂಡ ಈ ಸೂತ್ರ ತಿಳಿಯುವ ಹಾಗೆ ಮಾಡುವ ಜವಾಬ್ದಾರಿ ನನ್ನದು ಎಂದು ಸಚಿವರು ಭರವಸೆ ನೀಡಿದರು.
ಇಡೀ ವಿಶ್ವವೇ ಮತ್ತೆ ಜೂನ 21 ರಂದು ವಿಶ್ವ ಯೋಗ ದಿನಾಚಾರಣೆ ಆಚರಿಸಲು ತುದಿಗಾಲಲ್ಲಿ ನಿಂತಿದೆ. ಇತ್ತ ಕನರ್ಾಟಕದ ಹುಕ್ಕೇರಿ ಸ್ವಾಮೀಜಿ ದೇಶದ ಆರೋಗ್ಯಕ್ಕೆ ಸೂತ್ರವನ್ನು ಹೇಳಿದ್ದಾರೆ. ಅದು ಜನಾಂದೋಲನ ಮಾಡುವುದಕ್ಕಾಗಿ ಅಭಿಯಾನವನ್ನು ಶೀಘ್ರದಲ್ಲಿಯೇ ಆರಂಭಿಸುತ್ತಿದ್ದಾರೆ. ಶ್ರೀಗಳು ಸದಾ ಸಮಾಜಮುಖಿ ಕಾರ್ಯದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಪ್ಲಾಸ್ಟಿಕ್ ಮುಕ್ತ ಭಾರತದ ಅಭಿಯಾನ ಪ್ರಾರಂಭಿಸಿ ದೇಶದ ಗಮನ ಸೆಳೆದಿರುವ ಅವರು, ಈಗ ಮತ್ತೊಂದು ಅಭಿಯಾನಕ್ಕೆ ಕೈ ಹಾಕಿದ್ದಾರೆ. ಇದು ಪ್ರತಿಯೊಬ್ಬರ ಆರೋಗ್ಯಕ್ಕೆ ಸಂಬಂಧಿಸಿದ್ದು, ಹಾಗಂತ ಶ್ರೀಗಳು ಯಾವುದೇ ಸೂತ್ರವನ್ನು ಕಂಡುಹಿಡಿದಿಲ್ಲ. ಬದಲಾಗಿ ಖ್ಯಾತ ವೈದ್ಯರಾದ ಡಾ. ವೆಂಕಟರಮನ ಹೆಗಡೆ ಅವರ ತಂತ್ರವನ್ನು ಜನರಿಗೆ ತಿಳಿ ಹೇಳಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ವಿಶ್ವ ಯೋಗ ದಿನಾಚಾರಣೆಯಂದು ಭಾರತದ ಜನತೆ ಸಂಭ್ರಮದಿಂದ ಭಾಗಿಯಾಗುತ್ತಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿಯೂ ಸಹ ಯೋಗ ಮಾಡುವುದರ ಮೂಲಕ ವಿಶ್ವದ ಗಮನ ಸೆಳೆಯಲಿದ್ದಾರೆ. ಆದರೆ ಈ ಬಾರಿ ಕೇವಲ ಯೋಗ ಮಾಡುವುದೊಂದೆ ಮುಖ್ಯವಲ್ಲ. ವರ್ಷದ 365ದಿನವೂ ಉತ್ತಮ ಆರೋಗ್ಯಕ್ಕಾಗಿ ಯೋಗದ ಜತೆಗೆ ಡಾ. ವೆಂಕಟರಮಣ ಹೆಗಡೆ ಅವರ ತಂತ್ರದಂತೆ ಈ ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಅರಿವು ಮೂಡಿಸಲಿದ್ದಾರೆ ಎಂದು ಹೇಳಿದರು.
ಮನುಷ್ಯನು ಜೀವನದಲ್ಲಿ ಮಾನಸಿಕವಾಗಿ ಸದೃಡವಾಗಲು ಯೋಗದ ಜತೆಗೆ 6,4,2 ಪ್ಲಸ್1 ಸೂತ್ರವನ್ನು ಅಳವಡಿಸಿಕೊಂಡರೆ ಸಾಕು. ಈ ಸೂತ್ರದ ಅರ್ಥ 6 ಗಂಟೆ ನಿದ್ರೆ, 4 ಲೀಟರ್ ನೀರು ಕುಡಿಯುವುದು, 2 ಹೊತ್ತು ಊಟ ಮಾಡುವುದು, 2 ಹೊತ್ತು ಧ್ಯಾನ, ವಾರಕ್ಕೊಮ್ಮೆ ಉಪವಾಸದ ಜತೆಗೆ 1 ಗಂಟೆ ಯೋಗ ಮಾಡುವುದೇ ಈ ಸೂತ್ರದ ಅರ್ಥವಾಗಿದೆ. ಹಾಗಾಗಿ ಈ ಸೂತ್ರವನ್ನು ಎಲ್ಲರೂ ಕಟ್ಟು ನಿಟ್ಟಾಗಿ ಪಾಲಿಸಿದರೆ ಆರೋಗ್ಯ ಚನ್ನಾಗಿ ಇರುತ್ತದೆ. ಹೀಗಾಗಿ ಹುಕ್ಕೇರಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಈ ಸೂತ್ರವನ್ನು ದೇಶದ ಪ್ರತಿಯೊಬ್ಬರಿಗೂ ತಲುಪಿಸಲು ಮಾಡುತ್ತಿರುವ ಕಾರ್ಯಕ್ಕೆ ಎಲ್ಲರೂ ಕೈ ಜೊಡಿಸಬೇಕು ಎಂದರು.