ಮುಂಬೈ, ಮಾ. 19: ಬಾಲಿವುಡ್ ನ ಜನಪ್ರಿಯ ಅಭಿನೇತ್ರಿ, ಹಿರಿಯ ನಟಿ ಶರ್ಮಿಳಾ ಟಾಗೋರ್ ಆತ್ಮಚರಿತ್ರೆ ಬರೆಯಲಾರಂಭಿಸಿದ್ದಾರೆ.
ಆತ್ಮಚರಿತ್ರೆಗೆ “ಆಕ್ಸಿಡೆಂಟಲ್ ಆಕ್ಟ್ರೆಸ್” ಎಂಬ ಹೆಸರಿಡುವ ಸಾಧ್ಯತೆಯಿದೆ. ಶೀರ್ಷಿಕೆಯ ಬಗ್ಗೆ ಶರ್ಮಿಳಾ ಟಾಗೋರ್ ಆಪ್ತರ ಜತೆ ಚರ್ಚಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
“ನಾನು ಈಗ ತಾನೇ ಆತ್ಮಚರಿತ್ರೆ ಬರೆಯಲಾರಂಭಿಸಿರುವೆ. ಒಂದಲ್ಲ ಒಂದು ದಿನ ನನ್ನ ಪುಸ್ತಕ ಖಂಡಿತ ನಿಮ್ಮ ಮುಂದಿರಲಿದೆ. ಹಾಗಂತ ಬೇಗನೆ ಬರೆದು ಮುಗಿಸುವ ಗಡಿಬಿಡಿಯಲ್ಲೇನೂ ಇಲ್ಲ. ಪುಸ್ತಕಕ್ಕೆ ಆಕ್ಸಿಡೆಂಟಲ್ ಆಕ್ಟ್ರೆಸ್ ಎಂಬ ಹೆಸರಿಡುವ ಚಿಂತನೆಯಿದೆ. ಆದರೂ ಆಪ್ತರ ಜತೆ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇನೆ” ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಆತ್ಮಚರಿತ್ರೆ ಆಧರಿಸಿ ಚಲನಚಿತ್ರಗಳನ್ನು ತಯಾರಿಸಲಾಗುತ್ತಿದೆ. ತಮ್ಮ ಕಥೆಯೂ ಚಿತ್ರವಾಗಲಿದೆಯೇ ಎಂಬ ಪ್ರಶ್ನೆಗೆ, “ಚಿತ್ರಕಥೆಯು ದೇಶದ ಜನರ ಮುಂದಿಡುವಂತಿದೆ ಎಂದು ಯಾವುದೇ ನಿರ್ಮಾಪಕರಿಗೆ ಅನಿಸಿದರೆ, ಮುಂದೊಂದು ದಿನ ಚಿತ್ರ ತಯಾರಾಗಬಹುದು” ಎಂದಿದ್ದಾರೆ.
ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಸುಂದರ ನೆನಪುಗಳಿವೆ. ನಟಿಸಿರುವ ಒಂದೊಂದು ಚಿತ್ರಗಳೂ ಮಕ್ಕಳ ಸಮಾನ. ಹೀಗಾಗಿ ಎಲ್ಲವೂ ತಮಗೆ ಅಚ್ಚುಮೆಚ್ಚು ಎಂದು ಶರ್ಮಿಳಾ ಟಾಗೋರ್ ಹೇಳಿಕೊಂಡಿದ್ದಾರೆ.