ಬೆಳಗಾವಿ ಬಸವೇಶ್ವರ ಕೋ-ಆಪ್‌. ಬ್ಯಾಂಕ ಚುನಾವಣಾ ಫಲಿತಾಂಶ ಘೋಷಣೆ

Belgaum Basaveshwar Co-op. Bank election result declaration

ಬೆಳಗಾವಿ ಬಸವೇಶ್ವರ ಕೋ-ಆಪ್‌. ಬ್ಯಾಂಕ ಚುನಾವಣಾ ಫಲಿತಾಂಶ ಘೋಷಣೆ  

ಬೆಳಗಾವಿ 31: ಬ್ಯಾಂಕಿನ ಮುಂದಿನ ಐದು ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಚುನಾವಣೆಯು ರವಿವಾರ ದಿ. 29ರಂದು ಇಸ್ಲಾಮಿಯಾ ಹೈಸ್ಕೂಲ ಕ್ಯಾಂಪ ಬೆಳಗಾವಿಯಲ್ಲಿ ಜರುಗಿತು.ಚುನಾವಣಾ ಪ್ರಕ್ರಿಯೆಯನ್ನು ಬೆಳಗಾವಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ರಿಟರ್ನಿಂಗ ಅಧಿಕಾರಿ ಜಬಿವುಲ್ಲಾ ಕೆ. ಇವರು ಯಶಸ್ವಿಯಾಗಿ ಕೈಗೊಂಡರು. ಸಾಮಾನ್ಯ ಮತ ಕ್ಷೇತ್ರದ ಕಣದಲ್ಲಿ 15 ಜನ ಉಮೇದುವಾರರು, ಹಿಂದುಳಿದ ವರ್ಗ ‘ಬ’ ಮತ ಕ್ಷೇತ್ರದಲ್ಲಿ 3 ಜನ, ಮಹಿಳಾ ಮತಕ್ಷೇತ್ರದಲ್ಲಿ 4 ಜನ ಹಾಗೂ ಪರಿಶಿಷ್ಟ ಜಾತಿ ವರ್ಗದಲ್ಲಿ 2 ಜನ ಸ್ಪರ್ಧಿಸಿದ್ದರು. ಆ ಪೈಕಿ ಸಾಮಾನ್ಯ ಮತಕ್ಷೇತ್ರದಿಂದ ರಮೇಶ ಕಳಸಣ್ಣವರ, ಗೀರೀಶ ಕತ್ತಿಶೆಟ್ಟಿ, ಪ್ರಕಾಶ ಬಾಳೇಕುಂದ್ರಿ, ಬಸವರಾಜ ಝೂಂಡ, ಬಾಲಚಂದ್ರ ಬಾಗಿ, ಬಾಳಪ್ಪಾ ಕಗ್ಗಣಗಿ, ವಿಜಯಕುಮಾರ ಅಂಗಡಿ, ಸಚಿನ ಶಿವಣ್ಣವರ, ಬಸವರಾಜ ಉಪ್ಪಿನ, ಜಗದೀಶ ಖಡಬಡಿ ಹಾಗೂ ಸತೀಶ ಪಾಟೀಲ ಇವರು ಕ್ರಮಬದ್ಧವಾಗಿ ಸಾಮಾನ್ಯ ಮತಕ್ಷೇತ್ರದಿಂದ, ಮಹಿಳಾ ಮತಕ್ಷೇತ್ರದಿಂದ ಪೂಜಾ ಹುಕ್ಕೇರಿ ಹಾಗೂ ಸರಳಾ ಹೇರೆಕರ, ಹಿಂದುಳಿದ ವರ್ಗ ‘ಬ’ ಮತಕ್ಷೇತ್ರದಿಂದ ಗೀರೀಶ ಬಾಗಿ ಹಾಗೂ ಪರಿಶಿಷ್ಟ ಜಾತಿ ಮತಕ್ಷೇತ್ರದಿಂದ ಚಂದ್ರಕಾಂತ ಕಟ್ಟಿಮನಿ ಇವರು ಚುನಾಯಿತರಾಗಿ ಆಯ್ಕೆಗೊಂಡರು.  

ಅದರಂತೆ, ಹಿಂದುಳಿದ ‘ಅ’ ವರ್ಗದ ಮತಕ್ಷೇತ್ರದಿಂದ ರಮೇಶ ಸಿದ್ದಣ್ಣವರ ಹಾಗೂ ಪರಿಶಿಷ್ಟ ಪಂಗಡ ಮತಕ್ಷೇತ್ರದಿಂದ ರಾಜೀವ ಕಾಳೇನಟ್ಟಿ ಇವರು ಅವಿರೋಧವಾಗಿ ಆಯ್ಕೆಗೊಂಡರೆಂದು ಚುನಾವಣಾಧಿಕಾರಿಗಳು ಘೋಷಿಸಿದರು.  

ಆಯ್ಕೆಗೊಂಡ ಎಲ್ಲ ಅಭ್ಯರ್ಥಿಗಳನ್ನು, ರಿಟರ್ನಿಂಗ ಅಧಿಕಾರಿಗಳು, ಸಹಾಯಕ ನಿಬಂಧಕರ ಕಛೇರಿ ಸಿಬ್ಬಂದಿಗಳು, ಸದಸ್ಯರು ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರು ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದರು.