ಭಾರಿ ಮಳೆ: ಧರೆಗುರುಳಿದ ಮರ, ಎರಡು ಕಾರು ಜಖಂ!

Heavy rain: Tree falls, two cars damaged!

ಭಾರಿ ಮಳೆ:  ಧರೆಗುರುಳಿದ ಮರ, ಎರಡು ಕಾರು ಜಖಂ! 

ಮಹಾಲಿಂಗಪುರ 06: ಶನಿವಾರ ಮಧ್ಯಾಹ್ನ ಪಟ್ಟಣ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೂರ್ವ, ಈಶಾನ್ಯ ದಿಕ್ಕುಗಳಿಂದ ಆಗಮಿಸಿದ ಬಿರುಗಾಳಿ ಮತ್ತು ಗುಡುಗು ಸಹಿತ ಮುಂಗಾರು ಪೂರ್ವ ಮಳೆ ಒಂದು ಗಂಟೆ ಕಾಲ ಧಾರಾಕಾರ ಸುರಿದ ಪರಿಣಾಮವಾಗಿ ಪಟ್ಟಣದ ಅಲ್ಲಲ್ಲಿ ಗಿಡ ಮರಗಳು ಧರಾಶಾಯಿಯಾಗಿ ವಾಹನಗಳು, ಮನೆ, ಅಂಗಡಿ ಪತ್ರಾಸ್ ಶೆಡ್ ಗಳಿಗೆ ಹಾನಿಯುಂಟು ಮಾಡಿವೆ. ಪ್ರಸ್ತುತ ಬೇಸಿಗೆ ಕಾಲದ ಏಪ್ರಿಲ್ ತಿಂಗಳು ಆರಂಭಗೊಂಡಿದ್ದು, ಸಹಜವಾಗಿ ಬಿಸಿಲಿನ ಪ್ರಖರತೆ ಕೂಡ ಹೆಚ್ಚುತ್ತ ಸಾಗಿದೆ. ಈ ಕಾರಣದಿಂದ ಬಿಸಿಲಿನ ಝಳಕ್ಕೆ ಜನ ಹೈರಾಣಾಗಿ ಅವರಿಗೆ ದೈನಂದಿನ ಬದುಕು ಸಾಗಿಸುವುದೇ ದುಸ್ತರವಾಗಿತ್ತು. 

ಇಂತಹದರಲ್ಲಿ ಮರುಭೂಮಿಯ ಓಯಾಸೀಸನಂತೆ ಏಕಾಏಕಿ ಸುರಿದ ಮಳೆ ಸಂಪೂರ್ಣ ವಾತಾವರಣವನ್ನು ತಂಪಾಗಿಸದೆ ಹೋದರೂ, ಪರವಾಗಿಲ್ಲ ಎನ್ನುವಷ್ಟು ಕೆಲ ಜನತೆಯ ನೆಮ್ಮದಿಗೆ ಕಾರಣವಾದರೆ ಕೆಲವು ಜನರಿಗೆ ಸಂಕಷ್ಟ ತಂದೋಡಿದೆ.ಕ್ಷಣಾರ್ಧದಲ್ಲಿ ಬಿರುಗಾಳಿ ಮತ್ತು ಮಳೆ ಒಟ್ಟಿಗೆ ಆರಂಭಗೊಂಡು ರಸ್ತೆಯ ಅವಶೇಷವನ್ನೇ ಅಡಗಿಸಿದ ಅನುಭವ ಜನರಿಗಾಗಿದೆ.ವಡಗೇರಿ ಪ್ಲಾಟ್ ದೇವಸ್ಥಾನದ ದೊಡ್ಡ ಅರಳೆ ಮರ ಪಕ್ಕದಲ್ಲಿ ನಿಲ್ಲಿಸಿರುವ ಓಮ್ಮಿ ಹಾಗೂ ಟಾಟಾ ಕಂಪೆನಿಯ ಎರಡು ಕಾರ್ ಗಾಡಿಗಳ ಮೇಲೆ ಬಿದ್ದು ವಾಹನಗಳು ಭಾಗಶಃ ನಜ್ಜುಗುಜ್ಜಾಗಿವೆ.ಭಗೀರಥ ವೃತ್ತ ಹತ್ತಿರ ನಾಗಪ್ಪ ಯಾದವಾಡ ಎಂಬುವರ ಮನೆ ಮೇಲೆ ನಿರ್ಮಿಸಿದ ಪತ್ರಾಸ್ ಶೆಡ್ ಗಾಳಿಯ ರಭಸಕ್ಕೆ ಮತ್ತೊಬ್ಬರ ಮನೆ ಮೇಲೆ ಒರಗಿದೆ. 

ಅದೃಷ್ಟವಶಾತ ಈ ಘಟನೆಗಳಿಂದ ಯಾರಿಗೂ ತೊಂದರೆಯಾಗಿಲ್ಲ. ಆದರೆ ಇದನ್ನು ಹೊರತುಪಡಿಸಿ ಪಟ್ಟಣದ ಹಾಗೂ ಗ್ರಾಮೀಣ ಭಾಗಗಳಲ್ಲಿ ಇನ್ನೂ ಅನೇಕ ಘಟನೆಗಳು ನಡೆದಿವೆ.ಕೂಲಿನಾಲಿ ಮಾಡಿ ಬದುಕು ಸಾಗಿಸುವ ಅಲ್ಲಿಯ ಜನರ ಪರಿಸ್ಥಿತಿಗನುಗುಣವಾಗಿ ಆದ ನಷ್ಟವನ್ನು ಸ್ಥಳೀಯ ಆಡಳಿತ ಅರಿತು ಪರಿಹಾರಕ್ಕೆ ಮುಂದಿನ ಕ್ರಮ ಕೈಗೊಳ್ಳಬೇಕು.ಗಾಳಿಗೆ ಇನ್ನೆನು ತಿಂಗಳೊಳಗೆ ಉತ್ತಮ ಮಾವು ನೀಡುವ ಗಿಡಗಳು ಈ ಬಿರುಗಾಳಿಯ ರಭಸಕ್ಕೆ ಬೋರಲಾಗಿ ನಿಂತಿವೆ.