ಜೀವನದಲ್ಲಿ ಗುರು ಮತ್ತು ಗುರಿ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಅಭಿನವ ಮಂಜುನಾಥ
ಸಂಕೇಶ್ವರ 08: ವಿದ್ಯಾರ್ಥಿ ಜೀವನದಲ್ಲಿ ಗುರು ಮತ್ತು ಗುರಿ ಇದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ, ವಿದ್ಯಾರ್ಥಿಗಳು ಗುರುಗಳನ್ನು ಗೌರವಿಸಿ ತಂದೆ ತಾಯಿಯರನ್ನು ಪ್ರೀತಿಸಿ, ಒಳ್ಳೆಯ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಹುಕ್ಕೇರಿಯ ಕ್ಯಾರಗುಡ್ಡ ಇಂಚಗೇರಿ ಮಠದ ಅಭಿನವ ಮಂಜುನಾಥ ಮಹಾಸ್ವಾಮಿಗಳು ಕರೆ ನೀಡಿದರು.
ಪಟ್ಟಣದ ದುರುದುಂಡೇಶ್ವರ ಪ್ರೌಢಶಾಲೆಯ 1996-97ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಶಾಲೆಯ ಕುರಿತು ಚಿಂತನ ಮಂಥನ ಕಾರ್ಯಕ್ರಮವನ್ನು ಇಚಿಚೇಗೆ ಆಯೋಜಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹುಕ್ಕೇರಿಯ ಸುಕ್ಷೇತ್ರ ಕ್ಯಾರಗುಡ್ಡ ಇಂಚಗೇರಿ ಮಠದ ಅಭಿನವ ಮಂಜುನಾಥ ಮಹಾಸ್ವಾಮಿಗಳು ವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ಗುರು ಶಿಷ್ಯರ ಸಂಪ್ರದಾಯ ಪರಂಪರೆಯದ್ದಾಗಿದ್ದು, ಈ ಬಾಂಧವ್ಯವು ಸದಾ ಕಾಲ ಉಳಿಯಬೇಕು ಎಂದರು.
ಎಸ್.ಡಿವ್ಹಿ.ಎಸ್ ಸಂಘದ ಕಾರ್ಯದರ್ಶಿ ಜೆ.ಸಿ.ಕೋಟಗಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಹಾರಿಕೆ, ಆಶಿರ್ವಾದ ಇದ್ದರೆ ಅಂತ ವ್ಯಕ್ತಿ ಜೀವನದಲ್ಲಿ ಅತ್ಯಂತ ಉತ್ತಮ ಸ್ಥಾನ ಪಡೆಯುತ್ತಾನೆ. ಗುರುಗಳು ವಿದ್ಯಾರ್ಥಿಗಳ ಬದುಕಿನಲ್ಲಿ ಅಂದಕಾರವನ್ನು ತೆಗೆದು ಹಾಕಿ ಜ್ಞಾನದ ಬೆಳಕನ್ನು ಬೆಳಗಿಸುತ್ತಾರೆ ಎಂದರು.
ಬಳಿಕ ಎ.ಎಸ್. ನಾಡಗೌಡಾ ಅವರು ಮಾತನಾಡಿ, ವಿವಿಧ ವಿಷಯಗಳನ್ನು ನಿಸ್ವಾರ್ಥತನದಿಂದ ಕಲಿಸಿ ನಿಮ್ಮನ್ನು ಪ್ರಗತಿ ಪಥದಲ್ಲಿ ಕರೆದುಕೊಂಡು ಹೋಗುವವರೆ ಶಿಕ್ಷಕರು ಎಂದು ನುಡಿದರು. ಈ ಗುರುವಂದನಾ ಕಾರ್ಯಕ್ರಮದಲ್ಲಿ ವಿಶೇಷವಾಗಿ 30 ಅಧ್ಯಾಪಕರಿಗೆ ಗೌರವ ಹಾಗೂ ಸತ್ಕಾರ ಮಾಡಲಾಯಿತು.
ಕಾರ್ಯಕ್ರಮ ಅಧ್ಯಕ್ಷತೆ ಬಿ.ಎಸ್.ಚೌಗಲಾ ವಹಿಸಿದ್ದರು. ವ್ಹಿ.ವ್ಹಿ.ಪುರಾಣಿಕಮಠ, ಸಿಟಿ ಸಂಸುದ್ದಿ, ಎಸ್.ಬಿ.ಹಿರೇಮಠ ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು. ಈ ಕಾರ್ಯಕ್ರಮ ಯಶಸ್ವಿಯಾಗಲು ಅನೇಕ ವಿದ್ಯಾರ್ಥಿಗಳು ಶ್ರಮಿಸಿದರು. ಸತೀಶ ಅಕ್ಕತಂಗೇರಹಾಳ ಸ್ವಾಗತಿಸಿದರು. ವಿಜಯಲಕ್ಷ್ಮೀ ಮಿರ್ಜಿ ನಿರೂಪಿಸಿದರು.