ರಿಷಿಕೇಶ ಬಹದ್ದೂರ್ ದೇಸಾಯಿ, ಕೀರ್ತಿ ಶೇಖರ ಕಾಸರಗೋಡುಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ
ಬೆಳಗಾವಿ 02: ಬೆಳಗಾವಿಯ "ದಿ ಹಿಂದೂ" ಪತ್ರಿಕೆಯ ಹಿರಿಯ ಸಹಾಯಕ ಸಂಪಾದಕ ರಿಷಿಕೇಶ ಬಹದ್ದೂರ್ ದೇಸಾಯಿ ಅವರಿಗೆ ನಾಡಿನ ಪ್ರತಿಷ್ಠಿತ ಪತ್ರಿಕೋದ್ಯಮ ಪ್ರಶಸ್ತಿ ಒಲಿದು ಬಂದಿದೆ.
ರಿಷಿಕೇಶ್ ಬಹದ್ದೂರ್ ದೇಸಾಯಿ ಅವರು ಕಳೆದ ಮೂರು ದಶಕಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸಾಧನೆ ಪರಿಗಣಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರಿಗೆ ಈ ಬಾರಿಯ ಪ್ರಶಸ್ತಿ ಪ್ರಕಟಿಸಿದೆ. ಮೂಲತಃ ಬೀದರ್ ನವರಾದ ರಿಷಿಕೇಶ ಬಹದ್ದೂರ್ ದೇಸಾಯಿ ಅವರು ವಿಜಯ ಕರ್ನಾಟಕ, ದಿ ಹಿಂದೂ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಬೆಳಗಾವಿ ಪತ್ರಿಕೋದ್ಯಮದ ಹಿರಿಯ ಮಾರ್ಗದರ್ಶಕ ಪತ್ರಕರ್ತರಾಗಿರುವ ರಿಷಿಕೇಶ ಬಹದ್ದೂರ್ ದೇಸಾಯಿ ಅವರು ಪತ್ರಿಕೋದ್ಯಮ ವಲಯದಲ್ಲೇ ಅತ್ಯಂತ ಸ್ನೇಹಶೀಲ ಹಾಗೂ ಅಜಾತಶತ್ರು ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ಸ್ನೇಹಶೀಲ ಗುಣಗಳಿಂದ ಅವರು ಎಲ್ಲರ ಸ್ನೇಹ ಸಂಪಾದಿಸಿದ್ದಾರೆ. ಪತ್ರಿಕೋದ್ಯಮ, ಕಾನೂನು ಪದವೀಧರರಾಗಿರುವ ಅವರು, ಬೀದರ್, ಬೆಂಗಳೂರು, ಮೈಸೂರು, ಬೆಳಗಾವಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಹಿರಿಯ ಪತ್ರಕರ್ತೆ ಕೀರ್ತಿ ಶೇಖರ ಕಾಸರಗೋಡುಗೆ ಪತ್ರಿಕೋದ್ಯಮದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಘೋಷಣೆ
ಬೆಳಗಾವಿ: ಕಾಸರಗೋಡು ಮೂಲದ ಹಿರಿಯ ಪತ್ರಕರ್ತೆ ಕೀರ್ತನಾ ಕುಮಾರಿ (ಕೀರ್ತಿ ಶೇಖರ ಕಾಸರಗೋಡು) ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಬಸವರಾಜ ದೊಡ್ಮನಿ ಅವರು ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ಪ್ರಶಸ್ತಿ ಈ ವಿಭಾಗದಲ್ಲಿ ಈ ಸಲದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಳೆದ ಮೂರು ದಶಕಗಳಿಂದ ಕೀರ್ತಿ ಶೇಖರ ಕಾಸರಗೋಡು ಅವರು ಸಂಯುಕ್ತ ಕರ್ನಾಟಕ, ಕರ್ಮವೀರ, ಗಡಿನಾಡು, ಮಂಗಳೂರು ಮಿತ್ರ, ಜನ ಈ ದಿನ ಪತ್ರಿಕೆಗಳಲ್ಲಿ ಮಂಗಳೂರು, ಬೆಂಗಳೂರು ಹಾಗೂ ಬೆಳಗಾವಿಯಲ್ಲಿ ಪತ್ರಕರ್ತರಾಗಿ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಇದೀಗ ಅವರ ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ಅನುಪಮ ಕೊಡುಗೆ ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಅವರಿಗೆ ಪ್ರಶಸ್ತಿ ಘೋಷಣೆ ಮಾಡಿದೆ. ಮಾಧ್ಯಮ ಅಕಾಡೆಮಿಯ 2023, 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ ತಿಳಿಸಿದ್ದಾರೆ.