ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಾಣಲು ಭಾಷಾ ಶೈಲಿ ಅತ್ಯವಶ್ಯಕ
ವಿಜಯಪುರ 20: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸ್ಪಷ್ಟ ಹಾಗೂ ಪರಿಣಾಮಕಾರಿ ಭಾಷಾ ಶೈಲಿ ಅತ್ಯವಶ್ಯಕವಾಗಿದೆ ಎಂದು ಮಹಿಳಾ ವಿವಿಯ ಸ್ನಾತಕ ಕೋರ್ಸ ವಿಭಾಗಗಳ ವಿಶೇಷ ಅಧಿಕಾರಿ ಪ್ರೊ.ಸಕ್ಪಾಲ್ ಹೂವಣ್ಣ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಹಿಳಾ ವಿವಿಯ ಯುಜಿ ವಿದ್ಯಾರ್ಥಿನಿಯರಿಗಾಗಿ ಮಂಗಳವಾರ ಆಯೋಜಿಸಿದ್ದ ‘ಟೆಲಿವಿಷನ್ ಆ್ಯಂಕರಿಂಗ್’ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವತಂತ್ರವಾಗಿ ನಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಉದ್ಯೋಗ ಪಡೆಯವ ವಿಪುಲ ಅವಕಾಶಗಳನ್ನು ಮಾಧ್ಯಮ ಕ್ಷೇತ್ರ ನಿಮಗೆ ನೀಡುತ್ತದೆ. ಸುದ್ದಿಯನ್ನು ಸರಳವಾಗಿ, ಸ್ಪಷ್ಟವಾಗಿ ಹಾಗೂ ನೈಜತೆ ಉಳಿಸಿಕೊಂಡು ಪ್ರಸ್ತುತಪಡಿಸುವ ಸಾಮರ್ಥ್ಯ ಇದ್ದರೆ, ಓದುಗರ ವಿಶ್ವಾಸವನ್ನು ಗೆಲ್ಲಬಹುದು. ನಿಮ್ಮ ಕೌಶಲ್ಯಗಳು ನಿಮ್ಮ ಬಹುಮೌಲ್ಯ ಆಸ್ತಿಯಾಗುತ್ತವೆ. ವ್ಯಕ್ತಿತ್ವದ ಬೆಳವಣಿಗೆ, ಆಳವಾದ ವಿಶ್ಲೇಷಣಾತ್ಮಕ ಚಿಂತನೆ ಮತ್ತು ಪ್ರಭಾವಿ ಸಂವಹನಶೈಲಿಯಂತಹ ಗುಣಗಳನ್ನು ಈ ಕ್ಷೇತ್ರದಲ್ಲಿ ಬೆಳೆಸಿಕೊಳ್ಳಬಹುದು ಎಂದರು. ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರ ಕಾಕಡೆ ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರವು ಕೇವಲ ವೃತ್ತಿಯ ದಾರಿಯನ್ನಷ್ಟೇ ಅಲ್ಲ, ಜನರ ಬದುಕನ್ನೂ ಸಕಾರಾತ್ಮಕವಾಗಿ ರೂಪಿಸುವ ಶಕ್ತಿಯನ್ನು ಹೊಂದಿದೆ. ಮಾಧ್ಯಮವು ನಿಜಕ್ಕೂ ಸಮಾಜಕ್ಕೆ ದಿಕ್ಕು ತೋರಿಸುವ ಒಂದು ಪರಿಣಾಮಕಾರಿ ಸಾಧನವಾಗಿದೆ. ಇದು ವ್ಯಕ್ತಿಗೆ ತಮ್ಮ ಜೀವನದೊಂದಿಗೆ ಇತರರ ಬದುಕುಗಳಲ್ಲಿಯೂ ಬದಲಾವಣೆಯನ್ನು ತರಲು ಅವಕಾಶ ನೀಡುತ್ತದೆ. ಪತ್ರಿಕೋದ್ಯಮ ಶಿಕ್ಷಣವು ಉದ್ಯೋಗಪರ ದಕ್ಷತೆಗಳು ಮತ್ತು ಸಂವಹನ ಕೌಶಲ್ಯಗಳನ್ನು ಬೆಳೆಸುವುದರಲ್ಲಿ ಮಹತ್ವಪೂರ್ಣ ಪಾತ್ರವಹಿಸುತ್ತದೆ. ಡಿಜಿಟಲ್ ಯುಗದಲ್ಲಿ ಈ ಕೌಶಲ್ಯಗಳನ್ನು ಸದುಪಯೋಗಪಡಿಸಿಕೊಂಡು ಯಶಸ್ಸು ಸಾಧಿಸಲು ಇಂತಹ ಕಾರ್ಯಾಗಾರಗಳು ಮತ್ತು ತರಬೇತಿಗಳು ಬಹುಮುಖ್ಯವಾಗಿವೆ ಎಂದರು. ಕಾರ್ಯಾಗಾರದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ತಹಮೀನಾ ಕೋಲಾರ ಮತ್ತು ಸಂದೀಪ ನಾಯಕ, ಬೋಧಕ ಬೋದಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಹಾಗೂ ಸ್ನಾತಕೋತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿನಿಯರಾದ ಜಯಶ್ರೀ ತಳವಾರ ಸ್ವಾಗತಿಸಿದರು. ಫಿಲೋಮಿನಾ ಅತಿಥಿ ಪರಿಚಯಿಸಿದರು. ಸುಷ್ಮಾ ಪವಾರ ನಿರೂಪಿಸಿದರು. ಪವಿತ್ರಾ ಕಂಬಾರ ವಂದಿಸಿದರು.