ಸಾವಿತ್ರಿಬಾಯಿ ಫುಲೆ ಜನ್ಮದಿನವು ಮಹಿಳಾ ವಿಮೋಚನೆಯ ದಿನ : ಪ್ರೊ. ತ್ಯಾಗರಾಜ
ಬೆಳಗಾವಿ 03: ಮಾತೆ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವು ಮಹಿಳಾ ಶಕ್ತಿಯ ದಿನ ಮತ್ತು ಮಹಿಳಾ ವಿಮೋಚನೆಯ ದಿನ. ಪ್ರಸ್ತುತ ವಿದ್ಯಮಾನದಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿದ್ದಾರೆ ಇದರಿಂದ ಹೊರಬಂದು ಮಾತೆ ಸಾವಿತ್ರಿಬಾಯಿ ಫುಲೆ ಅವರಂತೆ ಶಿಕ್ಷಣದಲ್ಲಿ ಕ್ರಾಂತಿ ಮಾಡುವುದು ಮುಖ್ಯ ಎಂದು ರಾಚವಿವಿ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅಭಿಪ್ರಾಯಪಟ್ಟರು.
ದಿ. 3ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾವಿತ್ರಿಬಾಯಿ ಫುಲೆ ಅವರ 194ನೇ ಜಯಂತಿ ಕಾರ್ಯಕ್ರಮದ ಅಧ್*ಅಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ಪುಷ್ಪಾರ್ಚನೆಯೊಂದಿಗೆ ಗೌರವ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಚವಿವಿ ಕುಲಸಚಿವ ಸಂತೋಷ ಕಾಮಗೌಡ ಅವರು ಲಿಂಗ ತಾರತಮ್ಯ ಮತ್ತು ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಮಾತೆ ಸಾವಿತ್ರಿಬಾಯಿ ಫುಲೆ ಅವರ ಶಿಕ್ಷಣದ ಕ್ರಾಂತಿ ಮುಖ್ಯ ಅಡಿಪಾಯವಾಗಿದೆ. ಜೊತೆಗೆ ಹೆಣ್ಣು ಮಕ್ಕಳು ಶಿಕ್ಷಣ, ಆರ್ಥಿಕ ಹಾಗೂ ಇತರೆ ಕ್ಷೇತ್ರಗಳಲ್ಲಿ ಸಾಧನೆಗೈಯಲು ಸಾವಿತ್ರಿಬಾಯಿ ಫುಲೆ ಅವರು ನೀಡಿರುವ ಕೊಡುಗೆ ಅಪಾರ ಎಂದು ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮರಾಠಿ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ವಾಘಮಾರೆ ಇವರು ಸ್ತ್ರೀವಾದಿ ಸಾಹಿತ್ಯಕ್ಕೆ ಮುಖ್ಯ ಕೊಡುಗೆ ನೀಡಿದ ಮೊದಲಿಗರು ಸಾವಿತ್ರಿಬಾಯಿ ಫುಲೆ, ಉತ್ತರ ಪ್ರದೇಶದಲ್ಲಿ ಇವರ ಸಾಧನೆಯನ್ನು ಸ್ಮರಿಸಲು ಸಾವಿತ್ರಿಬಾಯಿ ಫುಲೆ ಮತ್ತು ಜ್ಯೊತೀಬಾ ಫುಲೆ ಜಿಲ್ಲೆಗಳಿವೆ ಇದು ಎಲ್ಲರೂ ಅರಿಯಬೇಕಾದ ವಿಷಯ. ಭಾರತದ ಮೊದಲ ಮಹಿಳಾ ಸಾಹಿತಿ ಕೂಡ ಸಾವಿತ್ರಿಬಾಯಿ ಫುಲೆ. ಸಾವಿತ್ರಿಬಾಯಿ ಫುಲೆಯವರ ಪ್ರಕಾರ ಶಿಕ್ಷಣವೆಂದರೆ ಸತ್ಯ ಮತ್ತು ಅಸತ್ಯದ ನಡುವಿನ ವ್ಯತ್ಯಾಸವನ್ನು ಅರಿಯುವುದು. ಬಾಲ ಹತ್ಯಾ ಪ್ರತಿಬಂಧಕ ಕೇಂದ್ರ ಸ್ಥಾಪನೆ ಮಾಡಿ ಮತ್ತು ವಿಧವಾ ಪುನರ್‌ವಿವಾಹ ನ್ಯಾಯಕ್ಕಾಗಿ ಶ್ರಮಿಸಿದರು. ಸತ್ಯ ಶೋಧಕ ಸಮಾಜದಿಂದ ಅಂತರ್ ಜಾತಿ ವಿವಾಹ ಮಾಡಿದರು. ತಾವು ಮಹಿಳೆಯರಿಗಾಗಿ ತೆರೆದ ಶಾಲೆಯಲ್ಲಿ ಶಿಷ್ಯವೇತನ ಪ್ರಾರಂಭಿಸಿ ಸಾವಿತ್ರಿಬಾಯಿ ಫುಲೆ ಅವರು ಸಮಾಜ ಸುಧಾರಕರಾಗಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕ ಡಾ. ಕವಿತಾ ಕುಸುಗಲ್ಲ ಇವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಅಧ್ಯಕ್ಷರು, ಬೋಧಕ ಮತ್ತು ಬೋಧಕೇತರ ವರ್ಗದವರು, ಸಂಶೋಧನಾರ್ಥಿಗಳು ಮತ್ತು ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇಂಗ್ಲೀಷ್ ವಿಭಾಗದ ವಿದ್ಯಾರ್ಥಿ ಗ್ಯಾನಪ್ಪಾ ಮಾದರ ಸಾವಿತ್ರಿಬಾಯಿ ಫುಲೆ ಅವರ ಗೀತೆಯನ್ನು ಹಾಡಿದರು. ಓಂ ಪ್ರೀಯಾ ಪೂಜಾರಿ ನಿರೂಪಿಸಿದರು. ರೋಹಿತ ಕಾಂಬಳೆ ವಂದನಾರೆ್ಣ ಸಲ್ಲಿಸಿದರು.