ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಇಲಾಖೆ ಕೈಗೊಂಡ ಕಾರ್ಯಯೋಜನೆ
ಹಾರೂಗೇರಿ 07 : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಅಧಿಕಾರಿಗಳಿಗೆ ದತ್ತು ನೀಡಿ, ವಿಶೇಷ ತರಗತಿ, ತರಬೇತಿ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಈ ವರ್ಷ ರಾಜ್ಯಮಟ್ಟದಲ್ಲಿ ಉತ್ತಮ ಫಲಿತಾಂಶಕ್ಕಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹಲವಾರು ಹೊಸ ಪ್ರಯೋಗ ಮತ್ತು ಕ್ರೀಯಾ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ನಾಲ್ಕು ಬಾರಿ ರಾಜ್ಯಕ್ಕೆ ಮೊದಲ ಸ್ಥಾನ, ಮೂರು ಬಾರಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ರಾಜ್ಯದ ಗಮನ ಸೆಳೆಯುತ್ತಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಈ ಬಾರಿ ಮೊದಲ ಸ್ಥಾನಕ್ಕೆ ಕಣ್ಣಿಟ್ಟಿದೆೆ. ಇದಕ್ಕಾಗಿ ಶಿಕ್ಷಣ ಇಲಾಖೆಯ ಅಧಿಕಾರಿ ವರ್ಗ, ಶಿಕ್ಷಕರ ಬಳಗ, ವಿದ್ಯಾರ್ಥಿಗಳು ಹಾಗೂ ಪಾಲಕರ ಸಾಂಘಿಕ ಶ್ರಮ ವಹಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಉಪನಿರ್ದೇಶಕರಾಗಿ ಆರ್.ಎಸ್.ಸೀತಾರಾಮು ಅವರು ಅಧಿಕಾರ ವಹಿಸಿಕೊಂಡ ಕೇವಲ ಎರಡೇ ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಹತ್ತಾರು ಕ್ರೀಯಾಯೋಜನೆಗಳನ್ನು ರೂಪಿಸುವ ಮೂಲಕ, ಕ್ರೀಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದಲ್ಲಿ 8 ವಲಯಗಳಲ್ಲಿ ಸರಕಾರಿ-238 ಶಾಲೆಗಳ 20165 ವಿದ್ಯಾರ್ಥಿಗಳು, ಅನುದಾನಿತ-152 ಶಾಲೆಗಳ 16257 ವಿದ್ಯಾರ್ಥಿಗಳು, ಅನುದಾನ ರಹಿತ-211 ಶಾಲೆಗಳ 8818 ವಿದ್ಯಾರ್ಥಿಗಳು, ಒಟ್ಟು 601 ಶಾಲೆಗಳ 23307 ವಿದ್ಯಾರ್ಥಿಗಳು ಹಾಗೂ 21933 ವಿದ್ಯಾರ್ಥಿನಿಯರು ಸೇರಿ ಒಟ್ಟು 45240 ಮಕ್ಕಳ ನೊಂದಣಿಯಾಗಿದೆ.
ಜಿಪಿಟಿ ಶಿಕ್ಷಕರಿಂದಲೂ ಸಹಕಾರ : ರಾಜ್ಯದಲ್ಲಿಯೇ ಪ್ರಥಮ ಪ್ರಯೋಗ ಎನ್ನುವಂತೆ ಶೈಕ್ಷಣಿಕ ಜಿಲ್ಲೆಯಲ್ಲಿರುವ ಸುಮಾರು ಸಾವಿರಕ್ಕೂ ಅಧಿಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿಯ 2 ಮಕ್ಕಳನ್ನು ದತ್ತು ನೀಡಲು ಮುಂದಾಗಿದ್ದಾರೆ. ಇದರಿಂದ ಜಿಲ್ಲೆಯ ಒಟ್ಟಾರೆ ಫಲಿತಾಂಶ ಸುಧಾರಣೆ ಮತ್ತು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಅಲ್ಲದೇ ಜಿಲ್ಲಾ ಹಾಗೂ ತಾಲೂಕು ಹಂತದ ಅಧಿಕಾರಿಗಳಿಗೆ ಮಕ್ಕಳನ್ನು ದತ್ತು ನೀಡಿ ಮಕ್ಕಳನ್ನು ಓದುವಂತೆ ಪ್ರೋತ್ಸಾಹ ನೀಡಿ, ಕನಿಷ್ಠ ಪಾಸಿಂಗ್ ಪ್ಯಾಕೇಜ್‌ನಿಂದ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಕ್ರಮ ಕೈಗೊಳ್ಳಲಾಗಿದೆ.ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು : ಎಸ್ಸೆಸ್ಸೆಲ್ಸಿಯ 2 ಮಕ್ಕಳನ್ನು ಸ್ವತಃ ಉಪನಿರ್ದೇಶಕರಾದ ಆರ್.ಎಸ್.ಸೀತಾರಾಮು ಅವರು ದತ್ತು ತೆಗೆದುಕೊಳ್ಳುವ ಮೂಲಕ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದ್ದಾರೆ. ಕೆಲಸದ ಮದ್ಯೆ ಒಂದಿಷ್ಟು ಬಿಡುವು ಮಾಡಿಕೊಂಡು, ಆ ಇಬ್ಬರು ಮಕ್ಕಳು ಯಾವ ವಿಷಯದಲ್ಲಿ ಹಿಂದುಳಿದ್ದಾರೆ ಎಂದು ಗುರುತಿಸಿ, ಅವರಿಗೆ ಆಯಾ ವಿಷಯಗಳ ಪಠ್ಯಗಳನ್ನು ಬೋಧಿಸಿ, ಎಲ್ಲ ವಿಷಯಗಳಲ್ಲೂ ಪರಿಣಿತರನ್ನಾಗಿ ಮಾಡಿ, ಉತ್ತಮ ಫಲಿತಾಂಶಕ್ಕೆ ಶ್ರಮಿಸುತ್ತಿದ್ದಾರೆ.
ಸಿಸಿಟಿವಿ ಕಣ್ಗಾವಲು : ಶಾಲಾ ಹಂತದಲ್ಲಿ ನಡೆಸಲಾಗುತ್ತಿರುವ ಮಾದರಿ ಹಾಗೂ ಕಿರು ಪರೀಕ್ಷೆಗಳನ್ನೂ ಸಿಸಿ ಟಿವಿ ಕಣ್ಗಾವಲಿನಲ್ಲಿ ಕಟ್ಟುನಿಟ್ಟಾಗಿ ನಡೆಸಲು ಸೂಚಿಸಲಾಗಿದೆ. ಅನುತ್ತೀರ್ಣ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಎಲ್ಲಿ ಕ್ಲಿಷ್ಟತೆ ಇದೆ ಎಂಬುದರ ಕುರಿತು ಚರ್ಚಿಸಿ, ವೈಯಕ್ತಿಕ ಗಮನ ಹರಿಸಿ, ವಿದ್ಯಾರ್ಥಿಗಳು ಓದಿಗೆ ಹೆಚ್ಚಿನ ಗಮನ ನೀಡಲು ಪ್ರೋತ್ಸಾಹ ನೀಡಿ ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಆತ್ಮಸ್ಥೈರ್ಯ ತುಂಬಿ, ಸುಲಭ ಶೈಲಿಯಲ್ಲಿ ಉತ್ತರ ಬರೆಯುವ ವಿಧಾನ ಕಲಿಸಿಕೊಡಲಾಗುತ್ತದೆ. ಹಾಗೂ ಅವರ ಫಲಿತಾಂಶ ಉತ್ತಮ ಪಡಿಸಲು ಬೆಳಿಗ್ಗೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ನಡೆಸುವುದು. ಶೇ.30ಕ್ಕಿಂತ ಕಡಿಮೆ ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಾಸಿಂಗ್ ಪ್ಯಾಕೇಜ್ ಎಂಬ ಹೊಸ ಕ್ರಮದ ಜೊತೆಗೆ ಇನ್ನೀತರ ಅಂಶಗಳನ್ನು ಅಳವಡಿಸಿಕೊಂಡು ಫಲಿತಾಂಶದಲ್ಲಿ ಮೇಲುಗೈ ಸಾಧಿಸಲು ಸಿದ್ಧತೆ ನಡೆದಿದೆ.
ಶಿಕ್ಷಕರ ಒಂಡಂಬಡಿಕೆ : ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲೀಷ ವಿಷಯಗಳ ಬಗ್ಗೆ ಹೆಚ್ಚಿನ ಆಸಕತಿ ಮೂಡಿಸಲು ಮತ್ತು ಪಠ್ಯವಿಷಯವನ್ನು ಮನವರಿಕೆ ಮಾಡಿಕೊಳ್ಳಲು ಅನುಕೂಲವಾಗಲು ಬೇರೆಬೇರೆ ಶಾಲೆಗಳಿಂದ ಗಣಿತ, ವಿಜ್ಞಾನ, ಇಂಗ್ಲೀಷ ಪರಿಣಿತ ಶಿಕ್ಷಕರನ್ನು ಕರೆಸಿ ಮಕ್ಕಳಿಗೆ ಪಾಠ ಮಾಡುವ ಕಾರ್ಯ ಈಗಾಗಲೇ ಪ್ರಗತಿಯಲ್ಲಿದ್ದು, ಶಿಕ್ಷಕ-ವಿದ್ಯಾರ್ಥಿ ಒಡಂಬಡಿಕೆ, ದೈನಂದಿನ ಬರವಣಿಗೆ, ಸರಣಿ ಪರೀಕ್ಷೆ ಮೊದಲಾದ ರಚನಾತ್ಮಕ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗ್ಗೆ ಇರುವ ಭಯ ಹೋಗಲಾಡಿಸಿ ಪರೀಕ್ಷೆಗೆ ಸಜ್ಜುಗೊಳಿಸಲಾಗಿದೆ.
ಮನೆಮನೆ ಭೇಟಿ : ಪ್ರತಿ 4ನೇ ಶನಿವಾರ ಪಾಲಕ/ಪೋಷಕರ ಸಭೆ ನಡೆಸುವುದು ಜೊತೆಗೆ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಮನೆಗಳಿಗೆ ಭೇಟಿ ನೀಡಿ, ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಕಲಿಕೆಗೆ ಪೂರಕ ವಾತಾವರಣ ಸೃಷ್ಠಿಗೆ ಅಗತ್ಯ ಕ್ರಮ ವಹಿಸಲು ಮಾರ್ಗದರ್ಶನ ನೀಡುವುದು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಶಾಲಾ ಸಮಯ ಹೊರತು ಪಡಿಸಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು, ಗೊಂದಲ ಪರಿಹಾರಕ್ಕಾಗಿ ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ವಿದ್ಯಾರ್ಥಿಗಳಿಗೆ ಕರೆ ಮಾಡುವ ಮೂಲಕ ನಿಗಾವಹಿಸಲಾಗುತ್ತದೆ.
ಉಸ್ತುವಾರಿ ಅಧಿಕಾರಿಗಳ ನೇಮಕ : ಎಸ್‌ಎ1 ಪರೀಕ್ಷೆಯಲ್ಲಿ ಶೇ.30 ಕ್ಕಿಂತ ಕಡಿಮೆ ಫಲಿತಾಂಶ ಬಂದ ಶಾಲೆಗಳಿಗೆ ಉಸ್ತುವಾರಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಿಂದಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳ ಫಲಿತಾಂಶ ಹೆಚ್ಚಳಕ್ಕೆ ಇಲಾಖೆ ವಿಶೇಷ ಆಸಕ್ತಿ ವಹಿಸಿದ್ದು, ಇಂತಹ ಪ್ರತಿ ಶಾಲೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ, ಶಾಲೆಗಳಿಗೆ ಭೇಟಿ ನೀಡಿ ಫಲಿತಾಂಶ ಹೆಚ್ಚಳಕ್ಕೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆೆ.
ಅಲ್ಲದೇ ವಿಷಯಾವಾರು ಕಾರ್ಯಾಗಾರ, ಸಂವಾದ, ಶಿಕ್ಷಕರ ಸಭೆ, ಮುಖ್ಯ ಶಿಕ್ಷಕರ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಕಳೆದ ವರ್ಷಗಳಿಗಿಂತ ಹೆಚ್ಚಿನ ಸಾಧನೆ ತೋರುವ ನಿಟ್ಟಿನಲ್ಲಿ ಮಕ್ಕಳನ್ನು ಸಜ್ಜುಗೊಳಿಸಲು ಕಾರ್ಯತಂತ್ರ ರೂಪಿಸಲಾಗಿದೆ. ಈ ಬಾರಿ ರಾಜ್ಯದಲ್ಲೇ ಟಾಪ್ ಬರಲು ಹಲವಾರು ಕಾರ್ಯಯೋಜನೆಗಳನ್ನು ರೂಪಿಸುವ ಮೂಲಕ ಶತಾಯ ಗತಾಯ ಪ್ರಯತ್ನಿಸುತ್ತಿದೆ.
(ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಶೈಕ್ಷಣಿಕ ವಾತಾವರಣ ಚೆನ್ನಾಗಿದ್ದು, ತಳ ಹಂತದಲ್ಲಿ ಎಲ್ಲ ಅಧಿಕಾರಿಗಳು, ಶಿಕ್ಷಕರು ಕಾರ್ಯಪ್ರವೃತ್ತರಾಗಿ ಪಾಲಕರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮಕ್ಕಳಿಗೆ ಪರೀಕ್ಷೆ ಎದುರಿಸುವ ಧೈರ್ಯ ತುಂಬಿ, ಜಿಲ್ಲೆಯ ಪ್ರತಿಯೊಂದು ಮಗುವು ಉತ್ತೀರ್ಣವಾಗುವಂತೆ ಪ್ರಾಮಾಣಿವಾಗಿ ಶ್ರಮಿಸಬೇಕು.