ಕೃಷಿ ವಿಜ್ಞಾನ ಕೇಂದ್ರದಲ್ಲಿ ಹತ್ತನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆ
ನೇಸರಗಿ 08:ಸಮೀಪದ ಮತ್ತಿಕೊಪ್ಪದ ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 08.01.2025 ರಂದು ಹತ್ತನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ನಡೆಸಲಾಯಿತು.
ಅಧ್ಯಕ್ಷತೆ ವಹಿಸಿ ಕೇಂದ್ರದ ಕಾರ್ಯಾಧ್ಯಕ್ಷ ಬಿ. ಆರ್. ಪಾಟೀಲ ಮಾತನಾಡಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ಆಶಯದಂತೆ 2011 ರಲ್ಲಿ ಸ್ಥಾಪನೆಗೊಂಡ ಕೃಷಿ ವಿಜ್ಞಾನ ಕೇಂದ್ರವು ರೈತ ಸಮುದಾಯದ ಕಲ್ಯಾಣದ ದೃಷ್ಟಿಯಿಂದ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ರೈತ ಸಮುದಾಯಕ್ಕೆ ಅತ್ಯುತ್ತಮ ಸೇವೆಗಳನ್ನು ಒದಗಿಸಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಉತ್ತಮ ಸಾಧನೆ ಮಾಡಿದೆ. ಕಳೆದ ವರ್ಷ ಕೆವಿಕೆ ಆವರಣದಲ್ಲಿ 8 ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳ ಬೀಜೋತ್ಪಾದನೆ ಕೈಗೊಂಡು 72.5 ಕ್ವಿಂ. ಬೀಜವನ್ನು 290 ರೈತರಿಗೆ ಪೂರೈಸಲಾಗಿದೆ. ಸೀಡ್‌ಹಬ್ ಯೋಜನೆಯಡಿಯಲ್ಲಿ ಹೆಸರು, ಉದ್ದು, ತೊಗರಿ ಹಾಗೂ ಕಡಲೆ ಬೆಳೆಗಳ ವಿವಿಧ ತಳಿಯ ಬೀಜೋತ್ಪಾದನೆಯನ್ನು ರೈತರ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿದ್ದು, ಒಟ್ಟು 363 ಕ್ವಿಂ. ಬೀಜವನ್ನು ಸಂಸ್ಕರಿಸಿ 1768 ರೈತರಿಗೆ ನೀಡಲಾಗಿದೆ. ಅಲ್ಲದೆ, ಸೋಯಾಬಿನ್ ಬೆಳೆಯ ವಿವಿಧ ತಳಿಗಳ 280.30 ಕ್ವಿಂ. ಬೀಜೋತ್ಪಾದನೆ ಮಾಡಲಾಗಿದ್ದು ಮುಂಗಾರು ಹಂಗಾಮಿನಲ್ಲಿ ರೈತರಿಗೆ ನೀಡಲಾಗುವುದು. ಎಂದರು.
ಕೆವಿಕೆಯ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಮಾತನಾಡಿ, ಹಿಂದಿನ ವೈಜ್ಞಾನಿಕ ಸಲಹಾ ಸಮಿತಿ ಸಭೆಯಲ್ಲಿ ನೀಡಿರುವ ಸಲಹೆಗಳಿಗೆ ತೆಗೆದುಕೊಂಡ ಕ್ರಮಗಳ ಕುರಿತು, 2024-25 ರ ಪ್ರಗತಿ ವರದಿ ಹಾಗೂ 2025-26 ರ ಕ್ರಿಯಾ ಯೋಜನೆಯ ಪ್ರಸ್ತಾವನೆಯನ್ನು ಮಂಡಿಸಿದರು.
ಕೆಎಲ್‌ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ. ಸುನೀಲ ಜಲಾಲಪುರೆ ಮಾತನಾಡಿ, ವಿವಿಧ ಇಲಾಖೆಗಳ ಮುಖ್ಯಸ್ಥರುಗಳು ಮಂಡಿಸಿದ ಅಭಿಪ್ರಾಯಗಳನ್ನು ಹಾಗೂ ರೈತರು ಅಪೇಕ್ಷಿಸಿದ ಯೋಜನೆಗಳನ್ನು ಆಧರಿಸಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಯೋಜನೆಯನ್ನು ರೂಪಿಸಬೇಕೆಂದು ಸಲಹೆ ನೀಡಿದರು. ತಾಂತ್ರಿಕ ಸಲಹೆಗಾರರಾದ ಡಾ. ಪಿ. ಎಸ್. ಹೂಗಾರರವರು ಪ್ರಾಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ಧಾರವಾಡ ಭಾರತೀಯ ಹುಲ್ಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ, ಡಾ. ಬಿ. ಜಿ. ಶಿವಕುಮಾರ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಶ್ರೀಪಾದ ವಿಶ್ವೇಶ್ವರ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಶಿವನಗೌಡ ಎಸ್. ಪಾಟೀಲ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಹಾಂತೇಶ ಮುರಗೋಡ, ನಬಾರ್ಡ್‌ನ ಅಭಿನವ ಯಾದವ, ಅರಣ್ಯ ಇಲಾಖೆಯ ಸುರೇಶ ದೊಡ್ಡಬಸಣ್ಣವರ, ನೀರಾವರಿ ಇಲಾಖೆಯ ಕೆ. ಸಿ. ಸತೀಶ, ಪಶುಸಂಗೋಪನೆ ಇಲಾಖೆಯ ಡಾ. ಸುದರ್ಶನ ಗಡಾದ, ರೇಷ್ಮೆ ಇಲಾಖೆಯ ಜಿ. ಬಿ. ಮಾಳನ್ನವರ, ಮೀನುಗಾರಿಕೆ ಇಲಾಖೆಯ ಆರ್. ವಿ. ಶಿಂಧೆ, ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ. ದತ್ತಾ ಮೇತ್ರೆ ಅಧಿಕಾರಿಗಳು ಹಾಗೂ ಪ್ರಗತಿಪರ ರೈತರಾದ ಶ್ರೀಮತಿ ವಿಜಯಲಕ್ಷ್ಮೀ ನಾಡಗೌಡರ, ಪ್ರಶಾಂತ ನೇಗೂರ, ನಾಗರಾಜ ತಲ್ಲೂರ, ರವಿ ಕುರಬೇಟ, ಮಹಾಂತೇಶ ತೋಟಗಿ, ಪರಶುರಾಮ ಪಾಟೀಲ, ಸುಭಾಷ ಕುಲಕರ್ಣಿ ಹಾಗೂ ಶಂಕರ ಕರವೀನಕೊಪ್ಪ ಭಾಗವಹಿಸಿ ಸಲಹೆ ನೀಡಿದರು. ರೈತರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರೈತರ ಸಮಸ್ಯೆಗಳನ್ನು ಚರ್ಚಿಸಿ ಕೃಷಿ ವಿಜ್ಞಾನ ಕೇಂದ್ರದ ಕಡೆಯಿಂದ ಮುಂಬರುವ ವರ್ಷದಲ್ಲಿ ಅನುಷ್ಠಾನಗೊಳಿಸಬಹುದಾದ ಕ್ರಿಯಾ ಯೋಜನೆಗಳನ್ನು ನಿರ್ಧರಿಸಿದರು.
ಕೇಂದ್ರದ ವಿಜ್ಞಾನಿಗಳಾದ ಎಸ್. ಎಮ್. ವಾರದ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ ಹಾಗೂ ಶಂಕರಗೌಡ ಪಾಟೀಲ ಚರ್ಚೆಯಲ್ಲಿ ಪಾಲ್ಗೊಂಡು ಯೋಜನೆ ರೂಪಿಸುವಲ್ಲಿ ಸಲಹೆಗಳನ್ನು ಸ್ವೀಕರಿಸಿದರು.