ಮಹಾಭಾರತ ಗ್ರಂಥ ಒಂದು ಅಕ್ಷಯ ಪಾತ್ರೆ : ಎಲ್‌. ಎಸ್‌. ಶಾಸ್ತ್ರಿ

The Mahabharata Granth is an inexhaustible vessel: L. S. Shastri

ಮಹಾಭಾರತ ಗ್ರಂಥ ಒಂದು ಅಕ್ಷಯ ಪಾತ್ರೆ : ಎಲ್‌. ಎಸ್‌. ಶಾಸ್ತ್ರಿ 

ಬೆಳಗಾವಿ 13: ಮಹಾಭಾರತ ಗ್ರಂಥ ಒಂದು ಅಕ್ಷಯ ಪಾತ್ರೆ. ಸೃಜನಶೀಲ ಮನಸ್ಸುಗಳಿಗೆ ಅದು ಅಸಂಖ್ಯಾತ ಹೊಸ ಹೊಸ ಕಲ್ಪನೆಗಳನ್ನು  ನೀಡುತ್ತ ಹೋಗುತ್ತದೆ. ಹತ್ತು ಹಲವು  ರೂಪದಲ್ಲಿ ಮಹಾಭಾರತ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಅದು ಆ ಮಹಾಕಾವ್ಯದ ಸತ್ವ ಎಂದು ಹಿರಿಯ ಪತ್ರಕರ್ತ, ಲೇಖಕ ಎಲ್‌. ಎಸ್‌. ಶಾಸ್ತ್ರಿಯವರು ಇಂದಿಲ್ಲಿ ಹೇಳಿದರು. 

ರಂಗಸಂಪದದವರು ದಿ. 11ರಿಂದ ದಿ. 14ರವರೆಗೆ ಪ್ರತಿದಿನ ಸಾಯಂಕಾಲ 6.30ಕ್ಕೆ 4 ದಿನಗಳ ಕಾಲ ‘ರಂಗ ಸಂಕ್ರಮಣ’ ನಾಟಕೋತ್ಸವವನ್ನು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದರು. ದಿ.11 ರಂದು ಧಾರವಾಡದ ಅಭಿನಯ ಭಾರತಿ ತಂಡದವರಿಂದ ಡಾ. ಎಚ್‌.ಎಸ್‌.ವಿ. ರಚನೆಯ ‘ಉರಿಯ ಉಯ್ಯಾಲೆ’ ಏಕವ್ಯಕ್ತಿ ಪ್ರದರ್ಶನಗೊಂಡಿತು. ನಾಟಕವನ್ನು ವೀಕ್ಷಿಸಿ ಶಾಸ್ತ್ರಿಯವರು ಮೇಲಿನಂತೆ ಪ್ರತಿಕ್ರಿಯಿಸಿದರು. 

ಶಾಸ್ತ್ರಿಯವರು ಡಾ. ಎಚ್‌.ಎಸ್‌. ವೇಂಕಟೇಶಮೂರ್ತಿ ರಚಿಸಿರುವ ‘ಉರಿಯ ಉಯ್ಯಾಲೆ’ ಮಹಾಭಾರತದ ಕಥಾನಾಯಿಕೆಯಂದೇ ಹೇಳಬಹುದಾದ ದ್ರೌಪದಿಯ ಒಳಬೇಗುದಿಗಳನ್ನು ಹೊರಹಾಕುವ ಏಕಪಾತ್ರಾಭಿನಯದ ಕೃತಿ. ದ್ರೌಪದಿಯ ಬದುಕಿನ  ಚಿತ್ರಣದೊಂದಿಗೆ ಮಹಾಭಾರತದ ಸಮಗ್ರ ಚಿತ್ರಣವನ್ನು ನೀಡುವ ಕೃತಿಯಿದಾಗಿದೆ ಎಂದು ಹೇಳಿದರು. 

ಭಾರತೀಯ ಜೀವ ವಿಮಾ ನಿಗಮದಲ್ಲಿ ಮ್ಯಾನೇಜರ್ (ಸೇಲ್ಸ) ರೆಂದು ಸೇವೆ ಸಲ್ಲಿಸುತ್ತಿರುವ ಮಾನೆಯವರು ನಾಟಕೋತ್ಸವನ್ನು ಉದ್ಘಾಟಿಸಿ ಮಾತನಾಡುತ್ತ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಾರ್ಯಗಳನ್ನು ಭಾರತೀಯ ಜೀವ ವಿಮಾ ನಿಗಮವು ಪ್ರೋತ್ಸಾಹಿಸುತ್ತ ಬಂದಿದೆ. ಜೀವ ವಿಮಾ ನಿಗಮವು ಹಣಕಾಸಿನ ದೃಷ್ಟಿಯಲ್ಲಿ ದೇಶದ ಬೆನ್ನೆಲಬಾಗಿ ನಿಂತಿದೆ. ಎಲ್‌.ಐ.ಸಿ.ಯಲ್ಲಿ ಹಲವಾರು ವಿಮಾ ಯೋಜನೆಗಳಿದ್ದು ಎಲ್ಲರೂ ಇದರ ಲಾಭವನ್ನು ಪಡೆಯಬೇಕು ಎಂದು ಹೇಳಿದರು. 

ರಂಗಸಂಪದದ ಅಧ್ಯಕ್ಷ ಡಾ. ಅರವಿಂದ ಕುಲಕರ್ಣಿಯವರು ಮಾತನಾಡುತ್ತ ಏಕವ್ಯಕ್ತಿ ಪ್ರದರ್ಶನ ತುಂಬ ಕಷ್ಟಕರವಾದ ಕಲೆ. ಡಾ. ಎಚ್‌.ಎಸ್‌.ವಿ. ಯವರ ಇಂದಿನ ನಾಟಕ  70 ನಿಮಿಗಳದ್ದಾಗಿದೆ.  ಬೇಸರ ಬರದಂತೆ ಪ್ರೇಕ್ಷಕರನ್ನು ಸೆರೆಹಿಡಿದಿಡುವ ಕೆಲಸ ಸಾಮಾನ್ಯವಾದುದಲ್ಲ. ಇದೇ ನಾಟಕವನ್ನು ಐದಾರು ಕಲಾವಿದರು ಸೇರಿಕೊಂಡು ಪ್ರದರ್ಶನ ನೀಡುತ್ತಿದ್ದಾರೆ. ಏಕವ್ಯಕ್ತಿ ಪ್ರದರ್ಶನವನ್ನು ತಮ್ಮ ಮುಂದೆ ಇದೀಗ ಪ್ರಸ್ತುತ ಪಡಿಸಿರುವ ಜ್ಯೋತಿ ದಿಕ್ಷೀತ ಪುರಾಣಿಕ ಇವರು ಅದ್ಭುತ ಕಲಾವಿದೆಯೆಂಬುದನ್ನು ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಹೇಳಿದರು.  ನಿರ್ದೇಶನ ಶ್ರೀಪತಿ ಮಂಜನಬೈಲು ಅವರದ್ದಾಗಿದೆ.