ವಿಜಯಪುರ: ಕೆಬಿಜೆಎನ್ಎಲ್ ಅಧಿಕಾರಿಗಳ ನಿರ್ಲಕ್ಷ್ಯ ಮನೆಗಳಿಗೆ ನುಗ್ಗಿದ ಕಾಲುವೆ ನೀರು

ಲೋಕದರ್ಶನ ವರದಿ

ವಿಜಯಪುರ 16: ಕೆಬಿಜೆಎನ್ಎಲ್ ಅಧಿಕಾರಿಗಳ ಎಡವಟ್ಟಿನಿಂದ 16ನೇ ವಿತರಣೆ ಕಾಲುವೆಯಲ್ಲಿ ಹರಿಯಬೇಕಿದ್ದ ನೀರು ಬೆಳಗ್ಗೆ ಪಟ್ಟಣದ ಇಳಿಜಾರು ಪ್ರದೇಶದಲ್ಲಿರುವ ಬಸವನಗರದ ಹಲವಾರು ಸಾರ್ವಜನಿಕರ ಮನೆಗಳಿಗೆ ನುಗ್ಗಿದೆ. 

ಕೆಲ ದಿನಗಳ ಹಿಂದೆ ಕೃಷ್ಣಾ ಎಡದಂಡೆ ಕಾಲುವೆಯಿಂದ ಆಲಮಟ್ಟಿ ಅಣೆಕಟ್ಟೆಗೆ ನೀರು ಹರಿಸಲಾಗಿತ್ತು. ಆದರೆ ಕಾಲುವೆಯಲ್ಲಿ ಹೂಳು ತುಂಬಿದ ಪರಿಣಾಮ ನೀರು ಮನೆಗಳತ್ತ ಧಾವಿಸಿ ಪೋಲಾಗುತ್ತಿರುವುದಕ್ಕೆ ಹಾಗೂ ಕಾಲುವೆ ದುರಸ್ತಿ ಮಾಡಲು ನಿರ್ಲಕ್ಷೃ ತೋರಿದ ಕೆಬಿಜೆಎನ್ಎಲ್ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕಾಲುವೆ ನೀರಿನ ಸಮಸ್ಯೆ ಕುರಿತು ಹಲವಾರು ಬಾರಿ ಕೆಬಿಜೆಎನ್ಎಲ್ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಮಾಡಿದ್ದರೂ ನಿರ್ಲಕ್ಷೃ ಮಾಡಿದ್ದಾರೆ. ಅಧಿಕಾರಿಗಳು ಇದೇ ರೀತಿ ಬೇಜವಾಬ್ದಾರಿ ಮುಂದುವರಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಡಿಎಸ್ಎಸ್ ಸಂಚಾಲಕ ಜೈಭೀಮ ನಾಯ್ಕೋಡಿ ಎಚ್ಚರಿಸಿದ್ದಾರೆ.