ಲೋಕದರ್ಶನ ವರದಿ
ವಿಜಯಪುರ 08: ವಿದ್ಯಾರ್ಥಿಗಳ ಬಸ್ ಪಾಸ್ ವಿತರಣೆ ಹಾಗೂ ವಸತಿನಿಲಯಗಳ ಪ್ರಾರಂಭಕ್ಕೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆಗ್ನೇಯ ಜೇಷನ್ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷ ಎಚ್.ಟಿ. ಭರತಕುಮಾರ ಮಾತನಾಡಿ, ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಮೇ ತಿಂಗಳಿನಲ್ಲೇ ಪ್ರಾರಂಭವಾಗಿವೆ. ಸುಗಮವಾಗಿ ತರಗತಿಗಳಿಗೆ ಹಾಜರಾಗಲು ಬಸ್ಪಾಸ್ ಅತ್ಯಗತ್ಯವಾಗಿದೆ. ಇನ್ನೂ ಬಸ್ಪಾಸ್ ದೊರಕದೆ ಪ್ರತಿದಿನ ವಿದ್ಯಾರ್ಥಿಗಳು ಬಸ್ಗಳಲ್ಲಿ ಟಿಕೇಟ್ಗೆ ಹಣ ವ್ಯಯಿಸಿ ಪ್ರಯಾಣಿಸುವಂತಾಗಿದೆ. ಬಡ ವಿದ್ಯಾರ್ಥಿಗಳು ಇನ್ನು ತರಗತಿಗಳಿಗೆ ಬರುತ್ತಿಲ್ಲ. ಇವರ ಪಾಲಕರಿಗೆ ಶಾಲಾ-ಕಾಲೇಜು ಶುಲ್ಕ ಕಟ್ಟಿ, ಬಸ್ಪಾಸ್ಗೆ ಸಾವಿರ ರೂಪಾಯಿ ಪಾವತಿಸುವುದೇ ಹೊರೆಯಾಗಿದೆ ಎಂದರು.
ಜಿಲ್ಲಾ ಸಂಚಾಲಕಿ ಶೊಭಾ.ಎಸ್ ಮಾತನಾಡಿ, ರಾಜ್ಯ ಸರಕಾರ ಉಚಿತವಾಗಿ ಬಸ್ ಪಾಸ ವಿತರಿಸಬೇಕಿತ್ತು ಆದರೆ, ಸರಕಾರದ ದಿವ್ಯ ನಿರ್ಲಕ್ಷ್ಯದಿಂದಾಗಿ ಸಿಗಬೇಕಿದ್ದ ಬಸ್ಪಾಸ್ ಕೂಡಾ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಸರಕಾರದ ಈ ಶಿಕ್ಷಣ ವಿರೋಧಿ ಕ್ರಮದ ವಿರುದ್ದ ವಿದ್ಯಾರ್ಥಿಗಳು ರಾಜ್ಯ ಸರಕಾರದ ವಿರುದ್ದ ಹೋರಾಡಲು ಬೀದಿಗೆ ಇಳಿಯಬೇಕಾಗಿ ಬಂದಿರುವುದು ದುರಂತವಾಗಿದೆ ಎಂದರು.
ಸಹ ಸಂಚಾಲಕಿ ಸುರೇಖಾ ಕಡಪಟ್ಟಿ ಮಾತನಾಡಿದರು. ಶಿಲ್ಪಾ ಬೋಯಿಟೆ, ಜ್ಯೋತಿ ಕುಂಬಾರ, ಲಕ್ಮೀ ಗುಣಕಿ, ಪ್ರಿಯಾಂಕಾ, ಧನಲಕ್ಮೀ, ಪವಿತ್ರಾ ಪೂಜಾರಿ, ರಾಹುಲ, ಶೀವಪುತ್ರ, ಶ್ರೀನಿವಾಸ, ನವಿನ, ಅಜಿತ, ಪ್ರಕಾಶ, ಜೈಭೀಮ, ಮಲ್ಲಿಕಾರ್ಜುನ, ಮುಂತಾದವರು ಭಾಗವಹಿಸಿದ್ದರು.