ವಿಜಯಪುರ 07: ಗಣೇಶ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಬಳಸದೇ ಜೇಡಿ ಮಣ್ಣಿನಿಂದ ತಯಾರಿಸಿದ ರಾಸಾಯನಿಕ ಬಣ್ಣ ಮುಕ್ತ ಗಣೇಶಮೂರ್ತಿಗಳನ್ನು ಬಳಸಿ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಾರ್ವಜನಿಕರು ಮುಂದಾಗುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಹಾಗೂ ರಸಾಯನಿಕ ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಜಲಮೂಲಗಳಲ್ಲಿ ವಿರ್ಸಜಿಸುವುದನ್ನು ನಿಷೇದಿಸುವ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಯಿತು.
ಇಲಾಖೆ ಪೋಲಿಸ ಇಲಾಖೆ ವಾಣಿಜ್ಯ ತೆರಿಗೆ ಇಲಾಖೆ ಹಾಗೂ ಗಣಿ ಭೂ ವಿಜ್ಞಾನಿ ಇಲಾಖೆ ಚೆಕ್ ಪೋಸ್ಟ್ಗಳನ್ನು ರಚಿಸಿ ತಡೆಯುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮಣ್ಣಿನಿಂದ ಸಿದ್ದಪಡಿಸಿದ ನೈಸರ್ಗಿಕ ಗಣೇಶ ವಿಗ್ರಹಗಳನ್ನು ಉಪಯೋಗಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರ ವಿತರಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಲಾಯಿತು.
ಆಯುಕ್ತರು ಮಣ್ಣಿನ ಗಣೇಶ ವಿಗ್ರಹಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 100 ಗಣೇಶ ವಿಗ್ರಹಗಳನ್ನು ಉಚಿತವಾಗಿ ವಿತರಿಸಲು ಯೋಜಿಸಲಾಗಿದೆ. ಪರಿಸರ ಸಂರಕ್ಷಣೆ ಹಾಗೂ ಅಂತರ್ಜಲ ಕಲುಷಿತವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ನಿಷೇದಿತ ಪಿ.ಓ.ಪಿ ಹಾಗೂ ರಸಾಯನಿಕ ಬಣ್ಣ ಲೇಪಿತ ಗಣೇಶ ವಿಗ್ರಹಗಳನ್ನು ಬಳಸದಂತೆ ಉಲ್ಲಂಘನೆದಾರರ ಮೇಲೆ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974 ರ ಕಲಂ 45 ಎ ರನ್ವಯ ದಂಡ ಹಾಗೂ ಜೈಲು ವಾಸದ ಶಿಕ್ಷೆ ವಿಧಿಸಲು ಅವಕಾಶವಿದ್ದ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.
ಸಭೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸುರೇಖಾ, ಮಹಾನಗರ ಪಾಲಿಕೆ ಆಯುಕ್ತರಾದ ಡಾ.ಔದ್ರಾಮ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.