ವಿಜಯಪುರ: ಅಂಗವಿಕಲ ಮಗುವನ್ನು ಕೊಂದ ತಂದೆ

ಲೋಕದರ್ಶನ ವರದಿ

ವಿಜಯಪುರ 19: ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ವೈದ್ಯಕೀಯ ವೆಚ್ಚ ಭರಿಸಲಾಗದೆ ತನ್ನ ಐದು ವರ್ಷದ ಅನಾರೋಗ್ಯ ಪೀಡಿತ ಅಂಗವಿಕಲ ಮಗನನ್ನು ಸುಪಾರಿ ನೀಡಿ ಕೊಲೆ ಮಾಡಿಸಿದ ತಂದೆಯ ದೌರ್ಜನ್ಯವನ್ನು, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಸಮಿತಿ ಸದಸ್ಯರು ಹಾಗೂ ವಿಕಲಚೇತನರ ಹೋರಾಟಗಾರರಾದ ಭೀಮನಗೌಡ ಬಿ ಪಾಟೀಲ್ (ಸಾಸನೂರ) ಅವರು ತೀವ್ರವಾಗಿ ಖಂಡಿಸಿದ್ದಾರೆ.

ಅಂಗವಿಕಲರು ಎಂದು ದೂಷಿಸಬೇಡಿ, ಅವರಿಗೂ ಸಮಾಜದಲ್ಲಿ ಒಂದು ಬೆಲೆಯಿದೆ. ಅವರಿಗೂ ಎಲ್ಲರಂತೆ ಬದುಕುವ ಸ್ವಾತಂತ್ರ್ಯವಿದೆ, ಅಂಗವಿಕಲತೆ ದೇಹಕ್ಕೆ ಇರಬಹುದು, ಆದರೆ ಅವರ ಬುದ್ದಿಮತ್ತೆಗೆ ಅಲ್ಲ. ಅಂಗವಿಕಲರು ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡಿದ ಸಾವಿರಾರು ನಿದರ್ಶನಗಳಿವೆ. 

ಏನೂ ಅರಿಯದ 5 ವರ್ಷದ ಮಾತನಾಡಲು ಹಾಗೂ ನಡೆದಾಡಲು ಬಾರದ ಅಂಗವಿಕಲ ಬಾಲಕ ಬಸವರಾಜುಗೆ ಸುಪಾರಿ ನೀಡಿ ಕೊಲೆ ಮಾಡಿಸುವ ತಂದೆಯ ಆಲೋಚನೆ ಎಷ್ಟರ ಮಟ್ಟಿಗೆ ಸರಿ? ಎಂದು ಅವರು ಪ್ರಶ್ನಿಸಿದ್ದಾರೆ. ಸುಪಾರಿ ಕೊಟ್ಟ ಆರೋಪಿ ತಂದೆ ಜಯಪ್ಪ ಮತ್ತು ಕೊಲೆ ಮಾಡಿದ ರೌಡಿ ಮಹೇಶ್ಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.