ವಿಜಯಪುರ: ಬರ ನಿರ್ವಹಣೆ: ಮುನ್ನೆಚ್ಚರಿಕಾ ವರದಿ ಸಿದ್ಧಪಡಿಸುವಂತೆ ಸೂಚನೆ

ಲೋಕದರ್ಶನ ವರದಿ

ವಿಜಯಪುರ 04: ಬರ ನಿರ್ವಹಿಸಲು ಜಿಲ್ಲೆಯ ಅಗತ್ಯಕ್ಕೆ ತಕ್ಕಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಹೆಚ್ಚಿನ ಚೆಕ್ಡ್ಯಾಂಗಳ ನಿರ್ಮಾಣ, ಮೇವು ಸಂಗ್ರಹ ಸೇರಿದಂತೆ ಜಿಲ್ಲೆಯ ಜನತೆಗೆ ಅನುಕೂಲವಾಗುವಂತೆ ಮುಂದಿನ 5 ವರ್ಷಗಳಿಗೆ ಬೇಕಾದ ಅನುದಾನದ ಪ್ರಸ್ತಾವನೆಯನ್ನು ಸಲ್ಲಿಸಲು ವಿವರವಾದ ಮಾಹಿತಿಯನ್ನು ಸಂಗ್ರಹಿಸಿ ಕೂಡಲೇ ಒದಗಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಬರ ನಿರ್ವಹಣೆಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕ್ರೀಯಾ ಯೋಜನೆ ಸಿದ್ದಪಡಿಸಲು ಆಯೋಜಿಸಿದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಈ ಪ್ರಸ್ತಾವನೆಯು ಮುಂದಿನ 5 ವರ್ಷಗಳಿಗೆ ಸಂಬಂಧಿಸಿದ್ದಾಗಿದ್ದು, ಬರ ಪರಿಸ್ಥಿತಿಯಲ್ಲಿ ರೈತರಿಗೆ, ಸಾರ್ವಜನಿಕರಿಗೆ ದನಕರುಗಳಿಗೆ ಯಾವುದೇ ತೊಂದರೆಯಾಗದಂತೆ ಪೂರ್ವಸಿದ್ಧತೆಯಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಅವುಗಳಿಗೆ ಬೇಕಾದ ಅಗತ್ಯ ಪ್ರಮಾಣದ ಅನುದಾನ ಕೋರಿಕೆ ಕುರಿತಾಗಿರುತ್ತದೆ ಎಂದು ಅವರು ಹೇಳಿದರು. 

ಆಲಮಟ್ಟಿ ಆಣೆಕಟ್ಟಿನಿಂದ ಹರಿದು ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಸಮೀಪದ ಹಳ್ಳಗಳಿಗೆ ಸಂಪರ್ಕ ಕಲ್ಪಿಸಬಹುದು. ಜಲಮೂಲಗಳಿರುವೆಡೆ ಇನ್ನೂ ಹೆಚ್ಚಿನ ಚೆಕ್ ಡ್ಯಾಂಗಳನ್ನು ನಿರ್ಮಿಸಬಹುದು . ಈ ಮೂಲಕ ಬೇಸಿಗೆಯಲ್ಲಿ ಉಂಟಾಗುವ ನೀರಿನ ಅಭಾವವನ್ನು ಎದುರಿಸಬಹುದು ಎಂದು ಹೇಳಿದರು. 

ಮೇವು ಬ್ಯಾಂಕ್ಗಳಲ್ಲಿ ಸೈಲೋ ಕಿಟ್ ತಯಾರಿಕೆ ಬಗ್ಗೆ ಪಶುಸಂಗೋಪನಾ ಇಲಾಖೆ ಅಧಿಕಾರಿ ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಕಾಸ ಕಿಶೋರ ಸುರಳಕರ ಅವರು, ಸೈಲೋ ಕಿಟ್ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿದ್ದು, ರೈತರಿಗೆ ಈ ಬಗ್ಗೆ ತಿಳುವಳಿಕೆ ಮೂಡಿಸಿ ರೈತರ ಬೇಡಿಕೆಯನುಸಾರ ಕಿಟ್ ಒದಗಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು. 

ಸಭೆಯಲ್ಲಿ ಪಾಲಿಹೌಸ್ ನಿಮರ್ಾಣ ಕೋಲ್ಡ್ ಸ್ಟೋರೇಜ್ ಹಾಗೂ ಪ್ರೊಸೆಸಿಂಗ್ ಯೂನಿಟ್ಗಳ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಜಿಲ್ಲೆಯಲ್ಲಿ ನೀರಿನ ಮೂಲ-ಸಂಗ್ರಹವಿರುವೆಡ ಮೀನುಗಳ ಉತ್ಪಾದನೆ ಹೆಚ್ಚಿಸಲು ಹಾಗೂ ನೀರಿನ ಸಂಗ್ರಹ ಕಾಯ್ದುಕೊಳ್ಳಲು ಇರುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಸೂಚಿಸಲಾಯಿತು. 

ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿದರ್ೇಶಕ ಡಾ.ಶಿವಕುಮಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಶಿಕ್ಕಲಿಗಾರ, ಲೀಡ್ ಬ್ಯಾಂಕ್ ಅಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.