ಲೋಕದರ್ಶನ ವರದಿ
ವಿಜಯಪುರ 17: ಕುಂಬಾರ ಸಮಾಜ ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದೆ ಬರಲು ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಒತ್ತುನೀಡಬೇಕು ಎಂದು ಸುರೇಶ ಕುಂಬಾರ ಹೇಳಿದರು.
ನಗರದ ಧರ್ಮಸ್ಥಳ ಮಂಜುನಾಥ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಆವರಣದಲ್ಲಿ ಕುಂಬಾರ ಸರ್ಕಾರಿ ಹಾಗೂ ಅರೆಸರ್ಕಾರಿ ನೌಕರರ ಸಂಘ ತನ್ನ ಮೂರನೇ ವಾರ್ಷಿಕ ಸರ್ವ ಸದಸ್ಯರ ಸಭೆ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ವಜ್ಞ ಕುಲಜರಾದ ಕುಂಬಾರರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಆಧುನೀಕರಣದ ಭರಾಟೆಯಲ್ಲಿ ನಾವಿಂದು ಮೂಲೆಗುಂಪಾಗಿದ್ದೇವೆ. ಸಮಾಜದ ಒಳಿತಿಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.
ಡಾ.ಸಂಗಣ್ಣ ಕುಂಬಾರ ಮಾತನಾಡಿ, ಸಮಾಜದ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬಡ್ಡಿರಹಿತ ಸಾಲ ನೀಡಲು 25 ಲಕ್ಷ ರೂ.ಮೂಲಧನೊಂದಿಗೆ ಟ್ರಸ್ಟ್ ಪ್ರಾರಂಭಿಸಲು ಉದ್ದೇಶಿಸಿದ್ದು, ಸರ್ಕಾರಿ ಹಾಗೂ ಅರೆಸರ್ಕಾರಿ ನೌಕರರು ಮತ್ತು ಆಥರ್ಿಕವಾಗಿ ಸಬಲರಾಗಿರುವ ಕುಂಬಾರ ಬಂಧುಗಳು ಈ ಕಾರ್ಯಕ್ಕೆ ಕೈಜೋಡಿಸಬೇಕೆಂದು ವಿನಂತಿಸಿದರು.
ದೇವೆಂದ್ರ ಕುಂಬಾರ, ಭಾಗೀರಥಿ ಕುಂಬಾರ, ಗೌರಮ್ಮ ಕುಂಬಾರ, ವೈದ್ಯಾಧಿಕಾರಿ ಬಸವರಾಜ ಕುಂಬಾರ, ಶಿವಮೂರ್ತಿ ಕುಂಬಾರ ಹಾಗೂ ಎಸ್ಎಸ್ಎಲ್ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಸಂಘದ ಕಾರ್ಯದರ್ಶಿ ಡಾ.ಅರವಿಂದ ಕುಂಬಾರ ಮಾತನಾಡಿ, ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, 2018-19ನೇ ಸಾಲಿನಲ್ಲಿ ಸದಸ್ಯರಿಗೆ 9 ಲಕ್ಷ ಸಾಲ ನೀಡಿ 45 ಸಾವಿರ ರೂ.ಲಾಭ ಗಳಿಸಿರುವುದಾಗಿ ತಿಳಿಸಿದರು.
ಸಿದ್ದಬಸು ಕುಂಬಾರ, ಎಂ.ಎಂ.ಬನೋಶಿ, ಶ್ರೀಶೈಲ ಬಳಗಾನೂರ, ಚನ್ನಸಂಗಪ್ಪ ಕುಂಬಾರ, ಚಂದ್ರಶೇಖರ ಕುಂಬಾರ, ಪ್ರಕಾಶ ಕುಂಬಾರ, ಎಸ್.ಜಿ. ಕುಂಬಾರ, ಶ್ರೀಕಾಂತ ಕುಂಬಾರ, ಪ್ರಕಾಶ ಕುಂಬಾರ ಆಗಮಿಸಿದ್ದರು. ಸಂಘದ ನಿರ್ದೇಶಕಿ ಸುವರ್ಣ ಕುಂಬಾರ ಪ್ರಾರ್ಥಿಸಿದರು. ಸಂಗಪ್ಪ ಕುಂಬಾರ ಸ್ವಾಗತಿಸಿದರು. ಶಿವಾನಂದ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಶುರಾಮ ಕುಂಬಾರ ನಿರೂಪಿಸಿದರು. ಎಸ್.ಆರ್. ಕುಂಬಾರ ವಂದಿಸಿದರು.