ಸಂವಿಧಾನದ ಆಶಯಕ್ಕನುಗುಣವಾಗಿ ನಡೆಯುವಂತೆ : ಜಿಪಂ ಸಿಇಒ ರಿಷಿ ಆನಂದ ಕರೆ

ಮೆರವಣಿಗೆ:

ವಿಜಯಪುರ ನ.26: ಸಮಾಜದಲ್ಲಿ ನಾವೆಲ್ಲರೂ ಸಮಾನರು, ತಾರತಮ್ಯ ಬೇಧಭಾವ ತೊರೆದು ಎಲ್ಲರೂ ಸಮಾನರೆಂಬ ಸಂವಿಧಾನದ ಆಶಯಕ್ಕನುಗುಣವಾಗಿ ನಡೆಯುವ ಮೂಲಕ ಸಂವಿಧಾನದ ಆಶಯವನ್ನು ಪ್ರತಿಯೊಬ್ಬರು ಎತ್ತಿ ಹಿಡಿಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಕರೆ ನೀಡಿದರು.   

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಸಂವಿಧಾನ ದಿನಾಚರಣೆ ಹಾಗೂ ವಿಚಾರ ಸಂಕಿರಣ -2024 ಕಾರ್ಯಕ್ರಮ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್ ರವರ ಜೀವನದ ಪ್ರಮುಖ ಘಟ್ಟಗಳ ಕುರಿತಾಗಿರುವ ಛಾಯಚಿತ್ರಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ನಮ್ಮ ದೇಶದ ಸಂವಿಧಾನ ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸಂವಿಧಾನದ ಪೀಠಿಕೆಯಲ್ಲಿಯೇ ಸಮಾನತೆ, ಭಾತೃತ್ವ, ಮೂಲಭೂತ ಹಕ್ಕುಗಳು ಹಾಗೂ ನಾಗರಿಕರ ಕರ್ತವ್ಯಗಳು, ಅಸ್ಪಶೃತೆ ನಿವಾರಣೆ, ಜೀವಿಸುವ ಹಕ್ಕು, ಉತ್ತಮ ಜೀವನ ನಿರ್ವಹಣೆ ಕುರಿತ ಅಂಶಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ. ನಮ್ಮ ದೇಶದ ಸಂವಿಧಾನದ ಪೀಠಿಕೆ ಭಾಗ ಸಮಾನತೆ ಹಾಗೂ ಭಾತೃತ್ವ ಕೈಗನ್ನಡಿಯಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯವನ್ನು ಸಂವಿಧಾನ ಒದಗಿಸುತ್ತದೆ. ಎಂದು ಅವರು ಹೇಳಿದರು.  

ಸಂವಿಧಾನವು ದೇಶದ ನಾಗರಿಕರಿಗೆ ಶಕ್ತಿಯಾಗಿದೆ. ನಮ್ಮ ಸಂವಿಧಾನವು ಸಾಕಷ್ಟು ಅಧ್ಯಾಯಗಳು, ಪರಿಚ್ಛೇಧಗಳನ್ನೊಗೊಂಡಿದೆ. ಪ್ರತಿಯೊಬ್ಬರು ಜೀವನ ಶೈಲಿ ಹೇಗಿರಬೇಕೆಂಬ ಕುರಿತು ಸಂವಿಧಾನದಲ್ಲಿ ಅಳವಡಿಸಲಾಗಿದೆ. ರಾಜ್ಯ, ನೀತಿ, ನಿರ್ದೇಶಕ ತತ್ವಗಳನ್ನು ಒಳಗೊಂಡ ಸುಂದರ ಸಂವಿಧಾನವಾಗಿದೆ. ಕಲ್ಯಾಣ ರಾಜ್ಯ ನಿರ್ಮಾಣ, ಜನಕಲ್ಯಾಣಕ್ಕಾಗಿ, ಸಂವಿಧಾನದ ಆಶಯಗಳು ತಿಳಿಸುತ್ತವೆ. ಇಂತಹ ಶ್ರೇಷ್ಠ ಸಂವಿಧಾನದ ಆಶಯಕ್ಕನುಗುಣವಾಗಿ ಪ್ರತಿಯೊಬ್ಬರ ನಡೆಯಬೇಕು ಎಂದು ಅವರು ಹೇಳಿದರು.  

ಭಾರತರತ್ನ ಡಾ.ಬಿ.ಆರ್‌. ಅಂಬೇಡ್ಕರ್ ಅವರ ಸಂವಿಧಾನವು ಬಡವರ, ಮಹಿಳೆಯರ ಶೋಷಿತರ ಧ್ವನಿಯಾಗಿದೆ. ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿ, ಸರ್ವರಿಗೂ ಸಮಾನತೆ ಒದಗಿಸಿದೆ. ನಮ್ಮ ಸಂವಿಧಾನದ ಆಶಯಗಳ ಕುರಿತು ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ವಿದ್ಯಾರ್ಥಿಗಳು ಸಹ ಡಾ.ಬಿ.ಆರ್‌. ಅಂಬೇಡ್ಕರ್ ಆವರ ಆದರ್ಶ, ವ್ಯಕ್ತಿತ್ವದಿಂದ ಪ್ರೇರೆಣೆ ಪಡೆದು, ಸಮಾಜಕ್ಕೆ ಕೊಡುಗೆ  ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ  ಸತತ ಅಧ್ಯಯನಶೀಲತೆ ಮೈಗೂಡಿಸಿಕೊಳ್ಳಬೇಕು.  ಅಧಿಕಾರಿಗಳು, ಸರ್ಕಾರದ ಹತ್ತು ಹಲವಾರು ಸವಲತ್ತುಗಳನ್ನು  ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಒದಗಿಸುವ ಮೂಲಕ ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.   

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಸಂವಿಧಾನದ ಪ್ರಸ್ತಾವನೆಯಲ್ಲಿ ಪ್ರತಿಯೊಂದು ಅಂಶಗಳು ಒಳಗೊಂಡಿದ್ದು, ಸರ್ವಧರ್ಮ, ಸರ್ವ ಜಾತಿಗೂ ಸಮಾನ ಅವಕಾಶ ಹಾಗೂ ಸಮಪಾಲು ಎಂಬ ಅಂಶವನ್ನು ಒಳಗೊಂಡಿದೆ. ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರಾತ್ಮಕವಾಗಿ ಸಲಹೆಗಳನ್ನು ಸಂವಿಧಾನ ನೀಡುತ್ತದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕುರಿತು ಸಂವಿಧಾನ ತಿಳಿಸುತ್ತದೆ.  

ಬೇರೆ ದೇಶಗಳಿಂದ ನಮ್ಮ ದೇಶದ ಸಂವಿಧಾನ ಅತ್ಯಂತ ಗಟ್ಟಿಯಾಗಿದೆ.  ಸಂವಿಧಾನದ ಆಶಯಗಳನ್ನು ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದೊಂದಿಗೆ ಸಂವಿಧಾನ ಸಮರೆ​‍್ಣಯ ದಿನವಾದ ನ.26ರಂದು ಸಂವಿಧಾನ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸಂವಿಧಾನದ ಆಶಯ ಮತ್ತು ಯಶಸ್ಸು ಸಂಭ್ರಮಿಸುವ ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಈ ಕಾರ್ಯ ನಿರಂತರವಾಗಿ ನಡೆಯಬೇಕು. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡದೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ  ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಹೇಳಿದರು.   

ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಮಾತನಾಡಿ, ಸಂವಿಧಾನ ಈ ನೆಲದ ಕಾನೂನಾಗಿದೆ. ಅದು ಶ್ರೇಷ್ಠ ಪುಸ್ತಕ. ನಮ್ಮೆಲ್ಲರನ್ನೂ ಒಂದುಗೂಡಿಸಿದ್ದು ಡಾ.ಬಿ.ಆರ್‌. ಅಂಬೇಡ್ಕರ ರಚಿಸಿರುವ ಸಂವಿಧಾನವಾಗಿದೆ. ಎಲ್ಲರಲ್ಲೂ ಸಮಾನತೆ, ಭಾತೃತ್ವ, ಸ್ವಾತಂತ್ರ ಮೂಡಿಸಿದೆ. ಸಮಾಜದಲ್ಲಿ ಶಾಂತಿಯುತವಾಗಿ ಜೀವನ ನಡೆಸಲು, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ನೀಡುವ ಸಂವಿಧಾನವಾಗಿದೆ. ಸಂವಿಧಾನದ ಆಶಯಕ್ಕನುಗುಣವಾಗಿ ಪ್ರತಿಯೊಬ್ಬರು ನಡೆಯುವ ಮೂಲಕ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು ಎಂದು ಅವರು ಹೇಳಿದರು.  

ಪ್ರಾಧ್ಯಾಪಕ ಹಾಗೂ ಹಿರಿಯ ಸಾಹಿತಿ ಎಚ್‌.ಟಿ. ಪೋತೆ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕಾಗಿ ಸಂವಿಧಾನದಲ್ಲಿ ಒತ್ತು ನೀಡಲಾಗಿದೆ.  ಸಂವಿಧಾನದ ಮೂಲಕ ಮತದಾನದ ಹಕ್ಕು ಕಲ್ಪಿಸಿದ ಡಾ.ಬಿ.ಆರ್‌.ಅಂಬೇಡ್ಕರ್ ಅವರು ತನ್ನ ವಿಧ್ವತ್ತಿನಿಂದ ವಿಶ್ವ ಪ್ರಸಿದ್ಧರಾದರು. ಇವರ ಆಚಾರ-ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಜ್ಞಾನಕೇಂದ್ರವಾಗಿರುವ ಡಾ.ಬಿ.ಆರ್‌.ಅಂಬೇಡ್ಕರ್ ಪುಸ್ತಕದ ದೊಡ್ಡ ಶಕ್ತಿಯಾಗಿದ್ದರು. ಇವರಿಂದ ಪ್ರೇರೆಣೆ ಪಡೆದು, ವಿದ್ಯಾರ್ಥಿಗಳು ಅಧ್ಯಯನಶೀಲತೆಯನ್ನು ರೂಢಿಸಿಕೊಳ್ಳಬೇಕು. ಅನೇಕ ಕಷ್ಟಗಳನ್ನು ಸಹಿಸಿ ಸಮಾಜದ ಹಿತಕ್ಕಾಗಿ ಶ್ರಮಿಸಿದ್ದಾರೆ. ಎರಡು ವರ್ಷ ಹನ್ನೊಂದು ತಿಂಗಳ ಹದಿನೆಂಟು ದಿನಗಳಲ್ಲಿ ಸಂವಿಧಾನ ರಚನೆ ಮಾಡುವ ಮೂಲಕ  ಶೋಷಿತ, ಮಹಿಳೆ, ದೀನ ದಲಿತರಿಗಾಗಿ ನ್ಯಾಯ ಒದಗಿಸಲು ಶ್ರಮಿಸಿದ್ದಾರೆ. ಸಂವಿಧಾನ ಜಾರಿ ಮಾಡುವ ಸಂದರ್ಭದಲ್ಲಿ ಜನರಿಂದ ಸ್ವೀಕರಿಸಿದ್ದ ಅನೇಕ ಟಿಪ್ಪಣಿಗಳಿಗೆ ಸಮರ್ಥನೀಯವಾಗಿ, ಸಮರ​‍್ಕವಾಗಿ ಸ್ಪಷ್ಟಣೆ ನೀಡುವ ಮೂಲಕ ಅಂಬೇಡ್ಕರ್ ಅವರು ಅರ್ಥಪೂರ್ಣ ಸಂವಿಧಾನ ಈ ದೇಶಕ್ಕೆ ನೀಡಿದ್ದಾರೆ ಎಂದು ಹೇಳಿದರು.   

ಕಾರ್ಯಕ್ರಮದಲ್ಲಿ ಅಭಿಷೇಕ ಚಕ್ರವರ್ತಿ ಅವರು ಮಾತನಾಡಿದರು. ಸಂವಿಧಾನ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ, ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಇಲಾಖೆಯ ಯೋಜಾನಾ ನಿರ್ದೇಶಕ ಬದ್ರುದ್ದಿನ್ ಸೌದಾಗಾರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಅಜೂರ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಶಹಾಪುರ, ಮಲ್ಲಿಕಾರ್ಜುನ ಬಟಗಿ, ಮಹೇಶ ಕ್ಯಾತನವರ, ಪಾವರ್ತಿ ಕುರ್ಲೆ, ಜಗದೇವ ಸೂರ್ಯವಂಶಿ ಸೇರಿದಂತೆ ಇತರರು  ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪುಂಡಲೀಕ ಮಾನವರ ಸ್ವಾಗತಿಸಿದರು. 

ವೇದಿಕೆ ಕಾರ್ಯಕ್ರಮದಲ್ಲಿ ಭಾರತ ಸಂವಿಧಾನ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಯಿತು.  ಭಾರತ ಸಂವಿಧಾನದ ಹೆಜ್ಜೆಗಳು ಕುರಿತಾಗಿ ಕೂಡಗಿ ಸರ್ಕಾರಿ ಪದವು ಪೂರ್ವ ಮಹಾವಿದ್ಯಾಲಯ ಉಪನ್ಯಾಸಕರಾದ ಬಸವರಾಜ ಜಾಲವಾದ ವಿಷಯ ಮಂಡನೆ ಮಾಡಿದರು. ಭಾರತದ ಸಂವಿಧಾನದ ಪ್ರಸ್ತಾವನೆ ಆಶಯಗಳ ಕುರಿತು  ಲಚ್ಯಾಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಭೀಮರಾವ ಗೊಣಸಗಿ ಅವರು ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಧ್ಯಕ್ಷತೆ ವಹಿಸಿದ್ದರು. 

ಸಂವಿಧಾನದ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆ ವಿಷಯದ ಕುರಿತು ವಿಜಯಪುರದ ನ್ಯಾಯವಾದಿಗಳ ಸಂಘದ ಗೌರವ ಕಾರ್ಯದರ್ಶಿಗಳಾದ ಸುರೇಶ್ ಚೂರಿ ವಿಷಯ ಮಂಡನೆ ಮಾಡಿದರು. 

 ಸಂವಿಧಾನ ಅಂದು ಮತ್ತು ಮುಂದು ವಿಷಯದ ಕುರಿತು ತಾಳಿಕೋಟೆಯ ಎಸ್ ಕೆ ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಸುಜಾತ ಚಲವಾದಿ ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯ ಅಧ್ಯಕ್ಷತೆಯನ್ನು ವಿಜಯಪೂರದ ಸಹಕಾರಿ ಇಲಾಖೆಯ ನಿವೃತ್ತ ಉಪ ನಿರ್ದೇಶಕರಾದ ಬಿ. ಆರ್ ಬನಸೋಡೆ ಅಧ್ಯಕ್ಷತೆ ವಹಿಸಿದ್ದರು. 

ಛಾಯಾಚಿತ್ರಗಳ ಪ್ರದರ್ಶನ: 

ಕಾರ್ಯಕ್ರಮದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಜೀವನದದ ಕುರಿತಾದ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಯಿತು. ಅದಲ್ಲದೇ ಈ ವೇಳೆ ವಿದ್ಯಾರ್ಥಿಗಳು, ಶಿಕ್ಷಕರು ಬಿಡಿಸಿದ ಚಿತ್ರಕಲೆಯನ್ನು ಸಹ ಪ್ರದರ್ಶಿಸಲಾಯಿತು. ಮಾಹಿತಿ ಆಗರವಾದ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದ ಸಾರ್ವಜನಿಕರು, ಅಂಬೇಡ್ಕರ್ ಅವರು ಕುರಿತ ಮಾಹಿತಿಯನ್ನು ಪಡೆದುಕೊಂಡರು. 

ಮೆರವಣಿಗೆ:  

ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಭಾರತದ ಸಂವಿಧಾನ ಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಚಾಲನೆ ನೀಡಿದರು. ಜಾಥಾದಲ್ಲಿ ವಿವಿಧ ಕಲಾಮೇಳಗಳ ಭಾಗವಹಿಸಿದ್ದವು. ಜಾಗೃತಿ ಜಾಥಾವು  ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.