ದೇವರಹಿಪ್ಪರಗಿ 20: ತಾಲೂಕಿನ ಕೆರೂಟಗಿ ತಾಂಡಾ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಕೊಠಡಿ ವರ್ಷದ ಮೊದಲ ಮಳೆಗೆ ಕುಸಿದು ಬಿದ್ದ ಘಟನೆ ಭಾನುವಾರ ನಡೆದಿದೆ.ಪ್ರಸಕ್ತ ವರ್ಷ ಶಾಲೆ ಪ್ರಾರಂಭಕ್ಕೂ ಮುನ್ನ ಮಳೆಗೆ ಕೊಠಡಿ ಸಂಪೂರ್ಣ ಕುಸಿದು ನೆಲಸಮವಾಗಿದೆ.
ಮಕ್ಕಳು ಶಾಲೆಯಲ್ಲಿ ಇರದ ಕಾರಣ ಭಾರೀ ಅನಾಹುತ ತಪ್ಪಿದೆ. ಕಟ್ಟಡವು ನಾಲ್ಕು ಕೊಠಡಿಗಳನ್ನು ಹೊಂದಿದ್ದು, ಹಳೆಯ ಶಾಲಾ ಕಟ್ಟಡ ಇದಾಗಿರುವುದರಿಂದ, ರಭಸದ ಮಳೆಗೆ ತತ್ತರಿಸಿ, ನೆಲಕ್ಕುರುಳಿದೆ.ಗ್ರಾಮದ ಪಾಲಕರು ಹಾಗೂ ಹಿರಿಯರು ಭಯಭೀತಗೊಂಡು ಶಾಲೆಯ ಸುತ್ತಲೂ ಜಮಾಯಿಸಿದ್ದರು. ಶಿಥಿಲಾವಸ್ಥೆಯಲ್ಲಿ ಕಟ್ಟಡದ ಕೊಠಡಿ ಬಿದ್ದಿದ್ದು, ಮಕ್ಕಳ ತರಗತಿಗೆ ಅನುವು ಮಾಡಿಕೊಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಗ್ರಾಮ ಪಂಚಾಯಿತಿಗೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಗ್ರಾಮದ ಮುಖಂಡರಿಂದ ಮನವಿ ಪತ್ರ ಸಲ್ಲಿಸಲಾಗಿದೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎನ್. ಯಡ್ರಾಮಿ ಅವರನ್ನು ಸಂಪರ್ಕಿಸಿದಾಗ ಗ್ರಾಮಸ್ಥರಿಂದ ಮನವಿ ಬಂದಿದೆ. ಶೀಘ್ರದಲ್ಲಿ ನಾನು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರೀಶೀಲನೆ ಮಾಡಿ ಆವರಣದಲ್ಲಿ ಎರಡು ಅಂಗನವಾಡಿ ಕಟ್ಟಡಗಳಿದ್ದು ಮಕ್ಕಳ ಶಿಕ್ಷಣಕ್ಕೆ ಸಮಸ್ಯೆ ಆಗದ ಹಾಗೆ ಒಂದು ಅಂಗನವಾಡಿ ಕಟ್ಟಡದಲ್ಲಿ ತರಗತಿ ಪ್ರಾರಂಭಿಸಲು ಸ್ಥಳ ಪರೀಶೀಲಿಸಿ ಸೂಚಿಸುತ್ತೇನೆ ಎಂದು ಹೇಳಿದರು.