ದೇವಸ್ಥಾನದ ಜಾಗೆ, ಇತರೆ ಆಸ್ತಿಗಳ ಸಂರಕ್ಷಣೆಗೆ ಮುಂದಾಗಿ: ಜಿಲ್ಲಾಧಿಕಾರಿ ಸುನೀಲ್ಕುಮಾರ್

ಕೊಪ್ಪಳ 21: ಕೊಪ್ಪಳ ಜಿಲ್ಲೆಯ ಕನಕಗಿರಿ ಕನಕಾಚಲಪತಿ ದೇವಸ್ಥಾನದ ಜಾಗೆಗಳು ಹಾಗೂ ಇತರೆ ಆಸ್ತಿಗಳನ್ನು ಸಂರಕ್ಷಿಸಲು ಮತ್ತು ದೇವಸ್ಥಾನದ ಸುತ್ತಲು ಇರುವ ಪ್ರದೇಶಗಳನ್ನು ನಿಗದಿಪಡಿಸಿ ಹದ್ದು-ಬಸ್ತು ಮಾಡಲು ಸರ್ವೇ  ಮಾಡಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಕನಕಾಚಲಪತಿ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು (ಸೆ.21) ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.   

ಶ್ರೀ ಕನಕಾಚಲಪತಿ ದೇವಸ್ಥಾನದ ದೇವಸ್ಥಾನಕ್ಕೆ ಸೇರಿದ ರಥಕ್ಕೆ ತ್ವರಿತವಾಗಿ ಅಚ್ಚುಗಳು ಮತ್ತು ಗಾಲಿಗಳು ಹೊಸದಾಗಿ ನಿರ್ಮಾಣ ಮಾಡಬೇಕು.  ರಾಜ್ಯ ಪುರಾತತ್ವ ಇಲಾಖೆಯಿಂದ ಕೈಪಿಡಿ ಹಾಗೂ ಗೋಪುರಗಳ ನವೀರಕಣ ಮತ್ತು ಕೈಪಿಡಿ ಗೊಂಬೆಗಳನ್ನು ಪುನರ್  ನಿರ್ಮಾಣ ಮಾಡಲು ರಾಜ್ಯ ಪುರಾತತ್ವ ಇಲಾಖೆ ಯಿಂದ ಅಂದಾಜು ಪಟ್ಟಿ ಪಡೆದು ಅಭಿವೃದ್ಧಿ ಮಾಡಬೇಕಾಗಿದ್ದು, ಡಿ.ಜೆ.ಐ ನಿಂದ ಪತ್ರ ಬಂದ ನಂತರ ಈ ಕುರಿತು ಕ್ರಮ ಕೈಗೊಳ್ಳಬೇಕಾಗುತ್ತದೆ.  ರಥದ ಶೆಡ್ಡನ್ನು ಸ್ಥಳಾಂತರ ಮತ್ತು ಹೊಸದಾಗಿ  ನಿರ್ಮಾಣ ಮಾಡುವುದು ಅವಶ್ಯವಿದ್ದಲ್ಲಿ ಈ ಕುರಿತು ಕ್ರಮ ಕೈಗೊಳ್ಳಬೇಕು.  ರಥದ ಸಾಗುವ ಬೀದಿಯ ಸಿಸಿ ರಸ್ತೆಯ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು. ರಸ್ತೆ ಪಕ್ಕದಲ್ಲಿನ ಅನಧೀಕೃತ ಅಂಗಡಿಗಳನ್ನು ತೆರವುಗೊಳಿಸಬೇಕು.  ದೇವಸ್ಥಾನಕ್ಕೆ ಸೇರಿದ ಚಿದಾನಂದ ಮಠದ ಗದ್ದುಗೆಯ ನವೀಕರಣ ಅಥವಾ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಬೇಕು.  ದೇವಸ್ಥಾನದ ಸುತ್ತಲು ನೆರಳಿಗಾಗಿ ಶೆಲ್ಟರ್ ನಿರ್ಮಾಣ ಮಾಡಬೇಕು.  ರಾಜ್ಯ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದು ಅತ್ಯಾಧುನಿಕ ಶೆಲ್ಟರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.    

ದೇವಸ್ಥಾನದ ಅನ್ನ ದಾಸೋಹದ ಭವನವನ್ನು ಹೊಸದಾಗಿ ನಿರ್ಮಾಣ ಮಾಡಲು ಈಗಾಗಲೇ ರೂ. 2 ಕೋಟಿ ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಿಸಲಾಗಿದ್ದು, ಈ ಕಾಮಗಾರಿಯನ್ನು ತ್ವರಿತವಾಗಿ ಪ್ರಾರಂಭಿಸಬೇಕು.  ದೇವಸ್ಥಾನದ ಜಾಗಗಳು ಹಾಗೂ ಇತರೇ ಆಸ್ತಿಗಳನ್ನು ಸಂರಕ್ಷಿಸಲು ಮತ್ತು ದೇವಸ್ಥಾನದ ಸುತ್ತಲು ಇರುವ ಪ್ರದೇಶಗಳನ್ನು ನಿಗದಿಪಡಿಸಿ ಹದ್ದುಬಸ್ತು ಮಾಡಲು ಗ್ರಾಮ ಪಂಚಾಯತ್ ಪಿಡಿಓಗಳೊಂದಿಗೆ ದಾಖಲಾತಿ ಪರಿಶೀಲನೆಗೆ ಮುಂದಾಗಬೇಕು.  ಅಂದಾಗ ದೇವಸ್ಥಾನದ ಸುತ್ತ ಮುತ್ತಲಿನ ಜಾಗದ ಸರ್ವೇನಂಬರ್ಗಳನ್ನು ನೋಡುವುದಕ್ಕೆ ಸಾಧ್ಯವಾಗಲಿದೆ.  ದೇವಸ್ಥಾನದ ಅನ್ನದಾಸೋಹ ಭವನದ ಹತ್ತಿರ ಹೆಚ್.ಕೆ.ಆರ್.ಡಿ.ಬಿ ಅನುದಾನದಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಬೇಕು.  ದೇವಸ್ಥಾನಕ್ಕೆ ಬರುವ ಭಕ್ತರು ತಲೆಮಂಡಿ ಕೊಡುವ ಪ್ರಸಿದ್ಧ ಸ್ಥಳವಾದ ಪುಷ್ಕರಣಿಯನ್ನು ಅಭಿವೃದ್ಧಿ ಪಡಿಸಬೇಕು. ಈ ಬಗ್ಗೆ ಅಂದಾಜು ಪಟ್ಟಿ ಪಡೆದು ಪ್ರವಾಸೋದ್ಯಮ ಇಲಾಖೆಯಿಂದ ಅನುದಾನವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ರವರು ಹೇಳಿದರು. 

ಸಭೆಯಲ್ಲಿ ಉಪವಿಭಾಧಿಕಾರಿ ಸಿ.ಡಿ ಗೀತಾ, ನಿಮರ್ಿತಿ ಕೇಂದ್ರದ ಶಶೀಧರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮೋತಿಲಾಲ ಲಮಾಣಿ, ಕನಕಾಚಲಪತಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್ ಚಂದ್ರಮೌಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.