ಶರಣರ ಆರೋಗ್ಯ ವಿಚಾರಗಳು ಇಂದಿಗೂ ಪ್ರಸ್ತುತ: ಡಾ.ಸಂಜಯ ಶಿಂಧಿಹಟ್ಟಿ

Amavasya Anubhava Ghosti

ಅಮವಾಸ್ಯೆ ಅನುಭಾವ ಗೋಷ್ಠಿ 

ಬೆಳಗಾವಿ 28: ಶರಣರ ವಚನಗಳಲ್ಲಿ ಆರೋಗ್ಯ ಚಿಂತನೆ ಹೆರಳವಾಗಿವೆ. ಕಾಯ ಹಾಗೂ ಕಾಯಕಕ್ಕೆ ಅವರು ಹೆಚ್ಚಿನ ಆದ್ಯತೆಯನ್ನು ನೀಡಿದರು. ಕಾಯವು ದಣಿಯಬೇಕು. ಪರಿಶ್ರಮದ ದುಡಿಮೆ ಮಾಡುವ ವ್ಯಕ್ತಿ ಆರೋಗ್ಯವಂತನಾಗಿ ಇರುವನು ಎಂಬ ಆರೋಗ್ಯದ ಸಿದ್ಧಸೂತ್ರವನ್ನು  ನೀಡಿದವರು ಶರಣರು ಎಂದು  ಮೂಡಲಗಿ ಕ.ಸಾ.ಪ ಅಧ್ಯಕ್ಷ ಡಾ.ಸಂಜಯ ಶಿಂಧಿಹಟ್ಟಿ ಹೇಳಿದರು. ಅವರು ಬೆಳಗಾವಿ ಜಿಲ್ಲಾ ಘಟಕದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ವಚನಗಳಲ್ಲಿ ಆರೋಗ್ಯ ವಿಜ್ಞಾನ’ ವಿಷಯ ಕುರಿತು ಉಪನ್ಯಾಸ ನೀಡಿದರು. 

ಕಾಯಕದಲ್ಲಿ ನಿರತನಾದರೆ ಗುರುದರ್ಶನವಾದರೂ ಮರೆಯಬೇಕು, ಲಿಂಗಪೂಜೆಯಾದರೂ ಮರೆಯಬೇಕು, ಜಂಗಮ ಮುಂದಿದಡು ಹಂಗು ಹರೆಯಬೇಕೆಂಬ ವಿಚಾರ ಶರಣರದು ಕಾಯವನ್ನು ಬಳಲಿಸಿ ಕಷ್ಟುಪಟ್ಟು ದುಡಿಯಬೇಕೆಂಬ ಸಂದೇಶ ಶರಣರದು. ಜೀವಾತ್ಮ ಹಾಗೂ ಪರಮಾತ್ಮರ ಅಸ್ತಿತ್ವವನ್ನು ಅರಿತುಕೊಂಡವರು ಮನೋಕ್ಲೇಶಗಳಿಂದ ಹೊರಬರುತ್ತಾರೆ. ಮನೋವಿಕಾಸ ಮಾತ್ರ ಸದೃಢವಾದ ಆರೋಗ್ಯವನ್ನು ನೀಡಲು ಸಾಧ್ಯ. ಈ ಸೂಕ್ಷ್ಮ ಶರೀರವು ಆಜ್ಞಾ ಚಕ್ರ, ವಿಶುದ್ಧ ಚಕ್ರ, ಅನಾಹತ ಚಕ್ರ, ಮಣಿಪೂರ ಚಕ್ರ, ಸ್ವಾಧಿಸ್ಠಾನ ಚಕ,್ರ ಮೂಲಾಧಾರ ಚಕ್ರಗಳನ್ನು ಹೊಂದಿರುತ್ತದೆ. ಇವುಗಳ ಏಕರೂಪತೆ ಮನುಷ್ಯನಿಗೆ ಅಗತ್ಯ. ಇವುಗಳ ಮೇಲೆ ನಿಯಂತ್ರಣ ಮಾತ್ರ ಮನಸ್ಸು ದೇಹಗಳನ್ನು ಆರೋಗ್ಯಪೂರ್ಣಗೊಳಿಸುತ್ತದೆ. ಇಂತಹ ಅನೇಕ ಸಂವೇದನೆಗಳನ್ನು ವಚನ ಸಾಹಿತ್ಯದಲ್ಲಿ ಅನೇಕ ಶರಣರು ಸುಂದರವಾಗಿ ಚರ್ಚಿಸಿದ್ದಾರೆ. ವಚನಗಳನ್ನು ಆಳವಾಗಿ ಅಧ್ಯಯನಿಸಿದಾಗ ಶರಣರ ಆರೋಗ್ಯದ ಪರಿಕಲ್ಪನೆಗಳನ್ನು ತಿಳಿದುಕೊಳ್ಳಲು ಸಾಧ್ಯವೆಂದು ಹೇಳಿದರು. 

ಅಧ್ಯಕ್ಷತೆಯನ್ನು ವಹಿಸಿದ್ದ ಮಹಾಸಭೆ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಅವರು ಮಾತನಾಡುತ್ತ, ಆರೋಗ್ಯ ವಿಜ್ಞಾನದ ಕುರಿತು ಶರಣರು ನೀಡಿರುವ ವಿಚಾರಗಳು ಇಂದಿಗೂ ಪ್ರಸ್ತುತವೆನಿಸಿದೆ. ಭವರೋಗ ವೈದ್ಯರು ಶರಣರು. ಆಹಾರ ಕಿರಿದು ಮಾಡಿರಣ್ಣಾ ಎಂದು ಅಕ್ಕ ಮಹಾದೇವಿ 12 ಶತಮಾನದಲ್ಲಿಯೇ ಹೇಳಿದ್ದಾಳೆ. ಆಹಾರದಿಂದಲೇ ವ್ಯಾದಿ, ಮನೋವಿಕಾರ ಎಂದು ಎಚ್ಚರಿಕೆಯನ್ನು ನೀಡಿದ್ದಾಳೆ. ಇಂದಿನ ಒತ್ತಡದ ಬದುಕಿನಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದೇವೆ. ಆರೋಗ್ಯವೇ ಭಾಗ್ಯ ಅದನ್ನು ಕಾಪಿಟ್ಟುಕೊಂಡರೆ ಜೀವನ ನಿರ್ಮಲವಾಗಿರುತ್ತದೆ. ಬದುಕಿನಲ್ಲಿ ನಾವು ಏನಾದರೂ ಸಾಧಿಸಬಹುದು. ಆರೋಗ್ಯದೆಡೆಗೆ ನಮ್ಮ ಗಮನ ವಿರಲಿ, ಮಹಾಸಭೆಯು ಅನೇಕ ಯುವ ಪ್ರತಿಭಾ ಸಂಪನ್ನರಿಗೆ ವೇದಿಕೆಯನು ಕಲ್ಪಿಸುತ್ತಿದೆ ಎಂದು ಹೇಳಿದರು. ಆಶೀರ್ವಚನ ನೀಡಿದ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿಯವರು, ಜೀವನದಲ್ಲಿ ಏನೆಲ್ಲವನ್ನೂ ಗಳಿಸಬಹುದು ಆದರೆ ಆರೋಗ್ಯ ಸಂಪತ್ತನ್ನು ಗಳಿಸುವುದು ಕಷ್ಟ. ಪ್ರಸ್ತುತ ದಿನಮಾನಗಳಲ್ಲಿ ಆರೋಗ್ಯಕ್ಕಾಗಿ ಹೆಚ್ಚಿನ ಕಾಳಜಿ ತೆಗೆದುಕೊಳ್ಳಬೇಕಾಗಿದೆ. ಹಿತಮಿತವಾದ ಆಹಾರ ಉತ್ತಮವಾದ ಆರೋಗ್ಯವನ್ನು ಕರುಣಿಸುತ್ತದೆ. ಪ್ರಕೃತಿಯು ನೀಡಿದ ಈ ಶರೀರವನ್ನು ನಾವು ಕಾಪಾಡಿಕೊಳ್ಳಬೇಕು. ದುಷ್ಟಚಟಗಳಿಗೆ ಈಡಾಗದೆ ಬದುಕನ್ನು ಸುಂದರಗೊಳಿಸಬೇಕಾಗಿದೆ. ಮಹಾಸಭೆಯು ಅನೇಕ ಚಿಂತನಾರ್ಹ ಉಪನ್ಯಾಸಗಳನ್ನು ಸಮಾಜದ ಜನತೆಗೆ ಮುಟ್ಟಿಸುವ ಕೆಲಸ ಮಾಡುತ್ತಿರುವುದು ಸುತ್ಯಾರ್ಹವೆಂದು ಹೇಳಿದರು. 

ಲತಾ ಹಿರೇಮಟ ವಚನ ಪ್ರಾರ್ಥನೆ ಸಲ್ಲಿಸಿದರು. ಶಾರದಾ ಹಿರೇಮಠ ವಚನ ವಿಶ್ಲೇಷಣೆ ಮಾಡಿದರು. ಶೈಲಾ ಸಂಸುದ್ದಿ ಸ್ವಾಗತಿಸಿದರು. ಸುಧಾ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಡಾ.ಭವ್ಯಾ ಸಂಪಗಾರ ವಂದಿಸಿದರು. ಶೈಲಜಾ  ಭಿಂಗೆ ಪ್ರಸಾದ ದಾಸೋಹ ಸೇವೆ ಮಾಡಿದರು. 

ಡಾ.ಎಚ್‌.ಬಿ.ರಾಜಶೇಖರ, ಡಾ.ಎಫ್‌.ವಿ.ಮಾನ್ವಿ, ನ್ಯಾಯವಾದಿ ವಿ.ಕೆ.ಪಾಟೀಲ, ಎಂ.ವೈ.ಮೆಣಸಿನಕಾಯಿ, ಪ್ರಸಾದ ಹಿರೇಮಠ, ಜ್ಯೋತಿ ಬದಾಮಿ, ಡಾ.ಗುರುದೇವಿ ಹುಲೆಪ್ಪನವರಮಠ, ಸರೋಜಾ ನಿಶಾನದಾರ, ಬಾಲಚಂದ್ರ ಬಾಗಿ, ಸೋಮಲಿಂಗ ಮಾವಿನಕಟ್ಟಿ, ರಮೇಶ ಕಳಸಣ್ಣನವರ, ಆರ್‌.ಪಿ.ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.