ಬುರ್ಕಿನಾ ಫಾಸೊ: ಗಣಿ ಕಾರ್ಮಿಕರ ಬೆಂಗಾವಲು ಮೇಲೆ ದಾಳಿ, 37 ಮಂದಿ ಸಾವು

 ಔಗಾಡೊಗೊ, ನ 7:     ಆಫ್ರಿಕಾದ ಬುರ್ಕಿನಾ ಫಾಸೊದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆನಡಾದ ಗಣಿಗಾರಿಕೆ ಕಂಪನಿ ಸೆಮಾಫೊದ ಕಾಮರ್ಿಕರನ್ನು ಸಾಗಿಸುತ್ತಿದ್ದ ವಾಹನಗಳ ಬೆಂಗಾವಲು ಗುರಿಯಾಗಿಸಿಕೊಂಡು ಬಂದೂಕುಧಾರಿಗಳು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದು, ಇತರ 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

ಸಮಫೊ ಗಣಿಗಾರಿಕೆ ಕಂಪನಿಯ ಸ್ಥಳೀಯ ನೌಕರರು, ಗುತ್ತಿಗೆದಾರರು ಮತ್ತು ಪೂರೈಕೆದಾರರನ್ನು ಹೊತ್ತ ಐದು ಬಸ್ಗಳನ್ನು ಗುರಿಯಾಗಿಸಿಕೊಂಡು ಅಪರಿಚಿತ ಬಂದೂಕುಧಾರಿಗಳು ಬುಧವಾರ ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 37 ಮಂದಿ ಸಾವನ್ನಪ್ಪಿದ್ದು, ಇತರ 60 ಮಂದಿ ಗಾಯಗೊಂಡಿದ್ದಾರೆ ಎಂದು ಬುರ್ಕಿನಾ ಫಾಸೊ ಪೂರ್ವ ವಲಯದ ಗವರ್ನರ್ ಸೈಡೌ ಸನೌ ತಿಳಿಸಿದ್ದಾರೆ. 

 ತಪೋವಾ ಪ್ರಾಂತ್ಯದಲ್ಲಿ ಬೌಂಗೌ ಚಿನ್ನದ ಗಣಿಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿ ಸೇನೆಯ ಬೆಂಗಾವಲಿನಲ್ಲಿ ಸಾಗುತ್ತಿದ್ದ ಐದು ಬಸ್ಸುಗಳ ಮೇಲೆ ದಾಳಿಕೋರರು ಹೊಂಚು ಹಾಕಿ ಈ ಕೃತ್ಯ ನಡೆಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿವೆ.  

 ಬುರ್ಕಿನಾ ಫಾಸೊದಲ್ಲಿ ಹಿಂಸಾಚಾರವನ್ನು ನಿಯಂತ್ರಿಸಲು ಸೇನೆ ಹರ ಸಾಹಸ ಪಡುತ್ತಿರುವ ಸಂದರ್ಭದಲ್ಲಿ  ಈ ದಾಳಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಭೀಕರವೆನಿಸಿದೆ.