ಲೋಕದರ್ಶನ ವರದಿ
ಕುದುರೆ ವ್ಯಾಪಾರ ನಿಂತಾಗ ಮಾತ್ರ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಲು ಸಾಧ್ಯ : ಬಸವರಾಜ ಹೊರಹಟ್ಟಿ
ಕಂಪ್ಲಿ 05: ಶಾಸಕರ ಖರೀದಿ ಮಾಡುವ ಕುದುರೆ ವ್ಯಾಪಾರ ನಿಂತಾಗ ಮಾತ್ರ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಹಟ್ಟಿ ಹೇಳಿದರು. ಸ್ಥಳೀಯ ಸಣಾಪುರ ರಸ್ತೆಯ ರೈನ್ ಬೋ ಕಾಲೇಜು ಆವರಣದಲ್ಲಿ ಕೆಸಿಬಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯ ಕೆ.ಎಸ್.ಚಾಂದ್ ಬಾಷಾ ಅವರ ಮಗಳ ಮದುವೆ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ, ವಧು-ವರರಿಗೆ ಆಶೀರ್ವದಿಸಿದ ನಂತರ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡಿ, ದುಡ್ಡಿನ ಮೇಲಿನ ರಾಜಕಾರಣಕ್ಕೆ ಅರ್ಥ ಇಲ್ಲ. ಕುದುರೆ ವ್ಯಾಪಾರದಂತೆ ಶಾಸಕರ ಖರೀದಿ ಮಾಡುವ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಇಂದಿನ ಹಣ ಬಲದಿಂದಾಗಿ ರಾಜಕಾರಣವು ಸಂಪೂರ್ಣವಾಗಿ ಹದಗೆಟ್ಟಿದೆ. ಜನಿವಾರ ತೆಗೆಸುವುದು ತಪ್ಪು, ಇಂತಹ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಪರೀಕ್ಷೆ ಪಾರದರ್ಶಕವಾಗಿರಬೇಕು ಹೊರತು ಜನಿವಾರ, ತಾಳಿ ಅಲ್ಲಾ. ಇಂತಹವರಿಗೆ ಕಾನೂನು ಕ್ರಮವಾಗಬೇಕಾಗಿದೆ. ಕಾಶ್ಮೀರದ ಪುಹಲ್ಗಾಮ್ ನಲ್ಲಿ ನಡೆದ ಅಮಾಯಕರ ಮೇಲಿನ ಉಗ್ರರ ದಾಳಿಯು ನೀಚ ಕೃತ್ಯವಾಗಿದೆ. ದೇಶ ಮೊದಲು. ಇಂತಹ ಘಟನೆಗಳನ್ನು ಮಾಡಿ. ತಲೆಮರೆಸಿಕೊಂಡ ಭಯೋತ್ಪಾದಕರಿಗೆ ತಕ್ಕಪಾಠ ಕಲಿಸಬೇಕು. ದೇಶದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೇಂದ್ರಾಡಳಿತವು ಭಯೋತ್ಪಾದನೆ ವಿರುದ್ಧ ಏನೇ ಕ್ರಮಕೈಗೊಂಡರೂ ಅದಕ್ಕೆ ದೇಶದ ಪ್ರತಿಯೊಬ್ಬರ ನಾಗರಿಕರ ಬೆಂಬಲ ಇರುತ್ತದೆ. ಸಭಾಧ್ಯಕ್ಷರ ಪೀಠಕ್ಕೆ ತನ್ನದೇ ಆದ ಗೌರವವಿದೆ. ಆದರೆ, ಕೆಲ ಶಾಸಕರು ಸಭಾಧ್ಯಕ್ಷ ಸ್ಥಾನಕ್ಕೆ ಅಗೌರವ ಮಾಡಿದ ಹಿನ್ನಲೆ ಅಮಾನತು ಮಾಡಿರುವುದು ಸರಿಯಾದ ಕ್ರಮವಾಗಿದೆ. ಇಂತವರಿಗೆ ಸರಿಯಾಗಿ ಪಾಠ ಕಲಿಸಿದರೆ, ಇಂತಹ ವರ್ತನೆಗಳು ಮುಂದಿನ ದಿನದಲ್ಲಿ ನಡೆಯುವದಿಲ್ಲ. ನಾಲ್ಕನೇ ಅಂಗವಾಗಿರುವ ಮಾಧ್ಯಮ ಅಂಗದವರು ನಿಖರ, ಸತ್ಯದ ವಿಷಯಕ್ಕೆ ಹೆಚ್ಚಿನ ಆಧ್ಯತೆ ನೀಡಿದರೆ ಮಾತ್ರ ಸಮಾಜದ ಬದಲಾವಣೆಗೆ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಶಾರುಖ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಮುಖಂಡರಾದ ಬಿ.ಸಿದ್ದಪ್ಪ, ಬಾಲಕೃಷ್ಣ, ನಾಗೇಂದ್ರ, ವೆಂಕಟರಮಣ, ಕೆ.ಎಸ್.ಮೈಬೂಬ್, ಬಿ.ದೇವೇಂದ್ರ ಸೇರಿದಂತೆ ಇತರರು ಇದ್ದರು.