ಮಾಸ್ಕೋ, ಜ. 31, ಚೀನಾದಲ್ಲಿ ಕರೋನವೈರಸ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿದೆ ಎಂದು ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಗುರುವಾರ ಹೇಳಿದ್ದಾರೆ."ಚೀನಾದ ಹೊರಗೆ ಕಂಡುಬಂದ ಹೆಚ್ಚಿನ ಸೋಂಕು ಪ್ರಕರಣಗಳು ವುಹಾನ್‌ಗೆ ಪ್ರಯಾಣ ಹೊಂದಿರುವವರಲ್ಲಿ [ವುಹಾನ್‌ನಲ್ಲಿ ವೈರಸ್ ಮೊದಲು ವರದಿಯಾಗಿದೆ] ಅಥವಾ ವುಹಾನ್‌ಗೆ ಪ್ರಯಾಣ ಬೆಳೆಸಿದವರೊಂದಿಗೆ ಸಂಪರ್ಕ ಹೊಂದಿರುವವರಲ್ಲಿ ಕಂಡುಬಂದಿವೆ. ಈ ವೈರಸ್ ಬಡ ರಾಷ್ಟ್ರಗಳಲ್ಲಿ ಯಾವ ರೀತಿಯ ಹಾನಿಯನ್ನುಂಟುಮಾಡುತ್ತದೆ ಎಂದು ನಮಗೆ ತಿಳಿದಿಲ್ಲ. ಆದರೂ ಈ ದೇಶಗಳಿಗೆ ಸಹಾಯ ಮಾಡಲು ನಾವು ಈಗ ಕಾರ್ಯನಿರ್ವಹಿಸಬೇಕು. ಈ ಎಲ್ಲಾ ಕಾರಣಗಳಿಗಾಗಿ, ನೋವೆಲ್ ಕರೋನವೈರಸ್ ಜಾಗತಿಕವಾಗಿ ಹಾನಿ ಉಂಟಾಗುವ ಬಗ್ಗೆ ಅಂತಾರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ನಾನು ಘೋಷಿಸುತ್ತಿದ್ದೇನೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅದೇ ಸಮಯದಲ್ಲಿ, ವ್ಯಾಪಾರ ಅಥವಾ ಪ್ರಯಾಣವನ್ನು ಮಿತಿಗೊಳಿಸಲು, ತಡೆಹಿಡಿಯಲು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡುತ್ತಿಲ್ಲ ಎಂದು ಟೆಡ್ರೊಸ್ ಸ್ಪಷ್ಟಪಡಿಸಿದರು.
ವದಂತಿಗಳು ಮತ್ತು ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಗಟ್ಟುವ ಅವಶ್ಯಕತೆಯಿದೆ ಎಂದು ಡಬ್ಲ್ಯುಎಚ್‌ಒ ಪ್ರಧಾನ ಕಾರ್ಯದರ್ಶಿ ಹೇಳಿದರು. ಚೀನಾ, ಈ ಸೋಂಕಿನ ವಿರುದ್ಧ ಸಮರ್ಥವಾದ ಮತ್ತು ದೃಢವಾದ ಪ್ರತಿಕ್ರಿಯೆಯನ್ನು ಪ್ರದರ್ಶಿಸುತ್ತಿದೆ. ಅಂತಹ ನಿರ್ಣಾಯಕ ಸಂದರ್ಭಗಳನ್ನು ನಿಭಾಯಿಸುವ ದೃಷ್ಟಿಯಿಂದ ಹೊಸ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥರು ಒತ್ತಿ ಹೇಳಿದರು.