ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ: ಪ್ರಗತಿ ಪರೀಶೀಲನಾ ಸಭೆ
ಕೊಪ್ಪಳ 28: ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್ ಪಾರ್ಸಿ ಬೌದ್ಧ ಸಮುದಾಯಗಳಗಳಿಗೆ ವಿವಿಧ ಯೋಜನೆಗಳಡಿಯಲ್ಲಿ ನಿಗದಿಪಡಿಸಿದ ಗುರಿಗಳಂತೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಂತೆ ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ ಹೇಳಿದರು.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು ಯೋಜನೆ ಹಾಗೂ ಆರ್ಥಿಕವಾಗಿ ಸಬಲಿಕರಣಗೊಳಿಸಲು ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಒದಗಿಸವ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನ, ಉಚಿತ ಪರೀಕ್ಷಾ ಪೂರ್ವ ತರಬೇತಿಗಳನ್ನು ನೀಡಲಾಗುತ್ತಿದ್ದು, ಇದರ ಸದುಪಯೋಗ ಅಲ್ಪಸಂಖ್ಯಾತರ ಸಮುದಾಯದ ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಲಿ. ಇದರ ಜೊತೆಗೆ ವಿವಿಧ ಇಲಾಖೆಗಳ ಮೂಲಕವು ಅಲ್ಪಸಂಖ್ಯಾತರಿಗಾಗಿಯೇ ಮೀಸಲಿಟ್ಟ ಅನುದಾನವನ್ನು ಸಹ ಅರ್ಹರಿಗೆ ತಲುಪಿಸಲು ಆಯಾ ಇಲಾಖೆಗಳ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ನಿವೇಶನ, ಮನೆಗಳ ಹಂಚಿಕೆ, ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಹಾಗೂ ವಿವಿಧ ಇಲಾಖೆಯ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಪ್ರಚಾರ ಕಾರ್ಯಕ್ರಮ ಕೈಗೊಂಡು ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ್ ಅಲಿ, ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಮೊಹಮ್ಮದ ನಜೀರುದ್ದಿನ, ಮೆಹಬೂಬ್ ಪಾಷಾ ಮಾನ್ವಿ, ಪ್ರಶಾಂತ ಎಸ್. ದೇಸಾಯಿ, ಎಂ.ಮದರ್ ವಲಿಸಾಬ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕು ವಿಸ್ತರಣಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.