ವಿಜಯಪುರ, ಡಿಸೆಂಬರ್ 4 : ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಯ ನೇಮಕಾತಿ ಪರೀಕ್ಷೆಯೂ ಡಿಸೆಂಬರ್ 7 ಹಾಗೂ 8 ರಂದು ಜರುಗಲಿದ್ದು, ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಿರುವ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಟ್ಟುನಿಟ್ಟಿನಿಂದ ಕರ್ತವ್ಯ ನಿರ್ವಹಿಸಿ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.
ಮಂಗಳವಾರ ದರಬಾರ ಕಾಲೇಜಿನ ಸಭಾಂಗಣದಲ್ಲಿ ಪಂಚಾಯತಿ ಅಭಿವೃದ್ದಿ ಅಧಿಕಾರಿ ಹುದ್ದೆಯ ನೇಮಕಾತಿ ಪರೀಕ್ಷೆಯ ಕುರಿತಾಗಿ ಪೂರ್ವಭಾವಿ ಸಭೆಯ ಅಧಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಡಿಸೆಂಬರ್ 7 ರಂದು 38 ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಭಾಷಾ ಪರೀಕ್ಷೆಗೆ 16,059 ಅಭ್ಯರ್ಥಿಗಳು ಹಾಗೂ ಡಿಸೆಂಬರ್ 8 ರಂದು 57 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪರಿಕ್ಷೆಯಲ್ಲಿ 21,226 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಪರೀಕ್ಷೆಯ ಎಲ್ಲ ಕೊಠಡಿಗಳಿಗೆ ಸಿ.ಸಿ ಕ್ಯಾಮರಾಗಳನ್ನು ಅಳವಡಿಸುವುದು, ಪರೀಕ್ಷಾ ದಿನದಂದು ಪ್ರತಿ ಕೊಠಡಿಗಳಲ್ಲಿ ಛಾಯಾಗ್ರಾಹಕರನ್ನು ನೇಮಿಸಬೇಕು, ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮುಖ್ಯದ್ವಾರದೊಳಗೆ ಬರುವಾಗ ಮೊಬೈಲ್ ಫೋನ್, ಸ್ಮಾರ್ಟ್‌ಫೋನ್, ಬ್ಯಾಗ್ ಹಾಗೂ ಇತರೇ ವಸ್ತುಗಳನ್ನು ಒಳಗಡೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಅಭ್ಯರ್ಥಿಯು ಒಳಗಡೆ ಹೋದ ನಂತರ ಮತ್ತೊಮ್ಮೆ ಪರೀಕ್ಷಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು, ಗಾಳಿ, ಬೆಳಕು ಸಮರ್ಕವಾಗಿ ಇರುವಂತೆ ನೋಡಿಕೊಳ್ಳಬೇಕು, ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಹಳ ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ತಪ್ಪುಗಳಾಗದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದಲ್ಲಿ ನಿರ್ಲಕ್ಷ ವಹಿಸಿದಲ್ಲಿ ಕೊಠಡಿಯ ಮೇಲ್ವಿಚಾರಕರನ್ನು ಹೊಣೆೆಗಾರರನ್ನಾಗಿ ಮಾಡಲಾಗುವುದು. ಕರ್ತವ್ಯ ನಿರ್ವಹಿಸುವವರು ಕಡ್ಡಾಯವಾಗಿ ಗುರುತಿನ ಚೀಟಿಗಳನ್ನು ಧರಿಸಿಬೇಕು. ಅವರನ್ನು ಹೊರತು ಪಡಿಸಿ ಯಾವುದೇ ವ್ಯಕ್ತಿಗಳಿಗೆ ಅವಕಾಶ ನೀಡದಂತೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಹೆೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಕೆ. ಹೊಸಮನಿ, ಶಿಕ್ಷಣಾಧಿಕಾರಿ ಅಶೋಕ್ ಲಿಮಕಾರ, ಜಿಲ್ಲಾ ಉಪ ಸಮನ್ವಯ ಅಧಿಕಾರಿ ಮಂಜುನಾಥ ಗುಳೇದಗುಡ್ಡ ಸೇರಿದಂತೆ ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.