ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025: ಮುಂಗಾರು ಪೂರ್ವ ಸಿದ್ಧತೆ ಕಾರ್ಯಕ್ರಮ

Developed Agriculture Sankalpa Abhiyan 2025: Pre-Monsoon Preparation Program

ಗದಗ 17: ವಿಕಸಿತ ಕೃಷಿ ಸಂಕಲ್ಪ ಅಭಿಯಾನ 2025 ರ ಅಡಿ ಮುಂಗಾರು ಪೂರ್ವ ಸಿದ್ಧತೆ ಕಾರ್ಯಕ್ರಮವನ್ನು ಕೇಂದ್ರ ಸರಕಾರದ ಮಾನ್ಯ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯವು ಕೃಷಿ ಮಂತ್ರಿಗಳ ಮಾರ್ಗದರ್ಶನದಂತೆ ದೇಶಾದ್ಯಾಂತ ಹಮ್ಮಿಕೊಳ್ಳುತ್ತಿದೆ.  ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ದೇಶದ ಕೃಷಿ ವಿಜ್ಞಾನ ಕೇಂದ್ರಗಳ ಕೃಷಿ ವಿಶ್ವ ವಿದ್ಯಾಲಯ, ಐ.ಸಿ.ಎ.ಆರ್ ಸಂಸ್ಥೆಗಳು, ಮತ್ತು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಇಫ್ಕೊ, ಅಧಿಕಾರಿಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಏರಿ​‍್ಡಸಲಾಗುವುದು.  ಇಲಾಖೆಯ ಅಧಿಕಾರಿಗಳು, ವಿಜ್ಞಾನಿಗಳು, ಸಂಘ ಸಂಸ್ಥೆಗಳು, ಸಮೂಹ ರೈತರ ಬಳಿಗೆ ಬಂದು ಕೃಷಿ ಬಗ್ಗೆ  ಮಾಹಿತಿಯನ್ನು ನೀಡಲಾಗುವುದು. ದೇಶದ ಎಲ್ಲ ಗ್ರಾಮಗಳನ್ನು ಈ ಯೋಜನೆ ಅಡಿಯಲ್ಲಿ ಸಂಪರ್ಕಿಸಿ ಮಾಹಿತಿ ನೀಡಲಾಗುವುದು.  ಪ್ರಮುಖವಾಗಿ ಕೃಷಿಯಲ್ಲಿ ವಿನೂತನ ತಂತ್ರಜ್ಞಾನಗಳು, ಹೊಸ ತಳಿಗಳು, ಬೀಜೋಪಚಾರ, ಮಣ್ಣು ಆಧಾರಿತ ಕೃಷಿ ಬೆಳೆಗಳು, ಕೃಷಿ ಭಾಗ್ಯ ಯೋಜನೆ, ಸಮಗ್ರ ಬೇಸಾಯ ಪದ್ಧತಿ, ಸರಕಾರದ ವಿವಿಧ ಯೋಜನೆಗಳು ಹಾಗೂ ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಹೇಗೆ ಪಡಯಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.   

ಈ ರಾಷ್ಟ್ರೀಯ ವಿಕಸಿತ ಕೃಷಿ ಸಂಕಲ್ಪ ಅಭಿಯಾನದಲ್ಲಿ 1500-2000 ತಂಡಗಳ ಮೂಲಕ ದೇಶದ 700 ಜಿಲ್ಲೆಗಳಲ್ಲಿನ ಸುಮಾರು 1.5 ರಿಂದ 2.00 ಕೋಟಿ ರೈತರೊಂದಿಗೆ ನೇರ ಸಂವಾದ ನಡೆಸಲಾಗುವುದು.  ಕೃಷಿಗೆ ಸಂಬಂಧಿಸಿದ ವಿನೂತನ ತಾಂತ್ರಿಕತೆಗಳು, ಹೊಸ ಬೀಜಗಳ ಮಾಹಿತಿ ಜೊತೆಗೆ ಸರಕಾರದ ಯೋಜನೆಗಳ ಕುರಿತು ಕೂಡ ಮಾಹಿತಿ ನೀಡಲಾಗುವುದು.   

ಜೊತೆಗೆ ಈ ಅಭಿಯಾನದಲ್ಲಿ ರೈತರು ನೀಡುವ ಪ್ರಕ್ರಿಯೆಗಳನ್ನು ಸಂಗ್ರಹಿಸಿ ಅವರ ಹೊಸ ಆವಿಷ್ಕಾರಗಳನ್ನು ಸಂಶೋಧನೆ ಮತ್ತು ಪ್ರಸಾರ ಚಟುವಟಿಕೆಗಳಲ್ಲಿ ಬಳಸಲಾಗುವುದು.  ಆದಕಾರಣ 2025 ರ ಮುಂಗಾರು ಹಂಗಾಮಿನಲ್ಲಿ ಐ.ಸಿ.ಎ.ಆರ್‌-ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿಯು ಮುಂಗಾರು ಪೂರ್ವ ಸಿದ್ಧತೆ ಅಭಿಯಾನವನ್ನು ದಿನಾಂಕ 16-05-2025 ರಿಂದ 02-06-2025 ರವರೆಗೆ ಕೃಷಿ ಇಲಾಖೆ, ಇಫ್ಕೊ ಸಂಸ್ಥೆ, ತೋಟಗಾರಿಕೆ ಇಲಾಖೆ ಹಾಗೂ ಪಶುಸಂಗೋಪನೆ ಇಲಾಖೆ ರೈತ ಸಂಘಟನೆಗಳ ಸಹಯೋಗದಲ್ಲಿ ಗದಗ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುವುದು.  

 ಕೃಷಿಗೆ ಸಂಬಂಧಪಟ್ಟ ವಿನೂತನ ತಾಂತ್ರಿಕತೆಗಳು, ಮಣ್ಣು ಪರೀಕ್ಷೆ, ಬೀಜೋಪಚಾರದ ಪ್ರಾತ್ಯಕ್ಷಿಕೆ, ಸಿರಿಧಾನ್ಯ ಬೆಳೆ ಹಾಗೂ ಅವುಗಳ ಪೌಷ್ಠಿಕತೆ, ಕೃಷಿ ಭಾಗ್ಯ, ಇಲಾಖೆಗಳ ಯೋಜನೆಗಳು, ಸಮಗ್ರ ಕೃಷಿ ಪದ್ಧತಿ, ಡ್ರೋನ್ ಪ್ರಾತ್ಯಕ್ಷಿಕೆ ಮತ್ತು ರೈತರ ಆವಿಷ್ಕಾರಗಳಿಗೆ ಹೆಚ್ಚು ಆದ್ಯತೆ ಕೊಟ್ಟು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು.  ಆದಕಾರಣ ಈ ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ಅಭಿಯಾನದ ತಂಡವು ತಮ್ಮ ಗ್ರಾಮಕ್ಕೆ ಬಂದಾಗ ರೈತರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿಯನ್ನು ತಿಳಿದುಕೊಂಡು ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.