ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ

Dharani Satyagraha demanding fulfillment of various demands

ತಾಳಿಕೋಟೆ 28: ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಜಿಲ್ಲಾ ಘಟಕ ಹಾಗೂ ಸ್ಥಳೀಯ ಕಲಕೇರಿ ಗ್ರಾಮ ಘಟಕದ ವತಿಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹವು ಮಂಗಳವಾರ ಎರಡನೆಯ ದಿನಕ್ಕೆ ಕಾಲಿಟ್ಟಿದ್ದು ಯಮನೂರಿ ಸಿಂದಗಿರಿ, ಪ್ರಕಾಶ ನಾಟಿಕಾರ, ಬಸವರಾಜ ಗುಡಸಲಮನಿ, ಆನಂದ ಹೊಸಮನಿ, ಸೋಮು ಹೊಸಮನಿ, ದೇವಿಂದ್ರ ವಡ್ಡರ ಭಾಗವಹಿಸಿದರು.  

ಮೊದಲ ದಿನ ಸೋಮವಾರದಂದು ಗ್ರಾಮದ  ಡಾ. ಅಂಬೇಡ್ಕರ್ ವೃತ್ತದಿಂದ ಮುಖ್ಯ ಬಜಾರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಂಘಟನೆ ವತಿಯಿಂದ ವಿವಿಧ ಬೇಡಿಕೆ ಈಡೇರಿಕೆಗಾಗಿ ಎರಡು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಜಿಲ್ಲಾ ಆಡಳಿತ ಮತ್ತು  ತಾಲ್ಲೂಕು  ಆಡಳಿತಗಳು ನಮ್ಮ ಮನವಿಗೆ ಸ್ಪಂದಿಸದ ಕಾರಣ ಬೃಹತ್ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ಪ್ರತಿಭಟನಾಕಾರರು ತಿಳಿಸಿದರು.  

ಕಲಕೇರಿ ಭಾಗದ ಕಾಲುವೆಗಳಿಗೆ ಸಮರ​‍್ಕ ನೀರು ಹಾಯಿಸಬೇಕು. ಅಪೂರ್ಣ ಕಾಮಗಾರಿ ಪೂರ್ಣಗೊಳಿಸಲು ಕೂಡಲೆ ಕ್ರಮ ವಹಿಸುವುದು.  ಕಲಕೇರಿಸುತ್ತಲಿನ  ಅಸ್ಕಿ, ಹುಣಶಾಳ. ಬೂದಿಹಾಳ ಕೆರೆಗಳಿಗೆ ನೀರು ತುಂಬಬೇಕು.  ಬೂದಿಹಾಳ- ಪೀರಾಪೂರ ಏತ ನೀರಾವರಿ ಪೈಪಲೈನ್ ಕಾರ್ಯ ಮುಗಿದಿದ್ದು ರೈತರಿಗೆ ಅವರ ಜಮೀನಿನಲ್ಲಿ ಪೈಪಲೈನ್ ಹಾದ ಬಗ್ಗೆ ನೋಟಿಸ್ ನೀಡಿ ನಿಯಮಾನುಸಾರ ಪರಿಹಾರ ನೀಡಬೇಕು.  ಜೆಜೆಎಮ್ ಕಾಮಗಾರಿ ಕಳಪೆಯಾಗಿದ್ದು ತನಿಖೆ ನಡೆಯಬೇಕು ಹಾಗೂ ಕಾಮಗಾರಿಗಾಗಿ ಅಗೆದಿರುವ ಸಿಸಿ ರಸ್ತೆ ದುರಸ್ತಿಯಾಗಬೆಕು.  ರೈತರಿಗೆ ದಿನದ ಏಳು ಘಂಟೆ 3ಫೇಸ್ ಹಾಗೂ ರಾತ್ರಿ 2 ಪೇಸ್ ವಿದ್ಯುತ್ ನೀಡಬೇಕು.  ಕಲಕೇರಿಯಿಂದ ವಿವಿಧ ಗ್ರಾಮಗಳಿಗೆ ಮತ್ತು ನಗರಗಳಿಗೆ ಹೋಗಬೇಕಾದ  ಎಲ್ಲಾ ರಸ್ತೆಗಳು ಹಾಳಾಗಿದ್ದು ಸರಿಪಡಿಸಬೇಕು.  ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಹೆಚ್ಚಿಸಿ, ಪ್ರತಿ ತಿಂಗಳು  ವೇತನ ನೀಡಬೇಕು.  ನರೇಗಾ ಯೋಜನೆಯಡಿ ರೈತರ ಜಮೀನಿನಲ್ಲಿ ಕೆಲಸ ಮಾಡಲು ಕ್ರಮ ಕೈಗೊಳ್ಳಬೇಕು. ಕಲಕೇರಿಯಲ್ಲಿ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜು ಪ್ರಾರಂಭಿಸಬೇಕು.  ಜನ ವಸತಿ ಪ್ರದೇಶದಿಂದ ಸರಾಯಿ ಅಂಗಡಿ ಸ್ಥಳಾಂತರಿಸಬೇಕು. ಮಟಕಾ ಮತ್ತು ಅಕ್ರಮ ಸರಾಯಿ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇವೇ ಮೊದಲಾದ ಇನ್ನೂ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.  

ಸಿದ್ದು ರಾಯಣ್ಣವರ, ವೈ. ಸಿ. ಮಯೂರ ಸಂತೋಷ ಮನಗೇರಿ, ಪರಶುರಾಮ ಬ್ಯಾಕೋಡ, ಸೋಮಶೇಖರ ಬಡಿಗೇರ, ಯಮನೂರಿ ಸಿಂಧಗಿರಿ, ಮಲ್ಲಪ್ಪ ನಡುವಿನಕೇರಿ, ಬಸವರಾಜ ಹ. ಗುಡಸಲಮನಿ, ದೇವೇಂದ್ರ ವಡ್ಡರ,  ಪ್ರಕಾಶ ನಡುವಿಕೇರಿ, ಆನಂದ ಹೊಸಮನಿ ಇತರಿದ್ದರು.  

ತಾಲೂಕು ಪಂಚಾಯಿತಿ ಇ.ಒ ಎನ್‌.ಎಸ್‌.ಮಸಳಿ ಸೋಮವಾರ ಪ್ರತಿಭಟನಾಕಾರರನ್ನು ಭೇಟಿಯಾಗಿ ಮನೊಲಿಸಲು ಪ್ರಯತ್ನಿಸಿದರು.  ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರೆಯುತ್ತದೆ ಎಂದು ಧರಣಿ ನಿರತರು ತಿಳಿಸಿದ್ದರಿಂದ ಅವರು ಮನವಿ ಸ್ವೀಕರಿಸಿ ಮರಳಿದರು.