ನವದೆಹಲಿ, ಏ ೭, ಕೇರಳದ ಕೊರೊನಾ ಪೀಡಿತರು ಪ್ರವೇಶಿಸದಂತೆ ತಡೆಯಲು ಹೆದ್ದಾರಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಕರ್ನಾಟಕ ತನ್ನ ಗಡಿ ಬಂದ್ ಮಾಡಿರುವ ವಿವಾದವನ್ನು ಉಭಯ ರಾಜ್ಯಗಳ ಜತೆ ಸಂವಾದ ನಡೆಸುವ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ತನ್ನ ರಾಜ್ಯದ ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವ ರೋಗಿಗಳಿಗೆ ಕೂಡಾ ಗಡಿ ಪ್ರವೇಶಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ದೂರಿ ಕೇರಳ ಸೋಮವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತುಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠದ ಮುಂದೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿವಾದ ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನ್ಯಾಯಪೀಠದ ಮುಂದೆ ವಿವರಿಸಿದರು. ಕೇಂದ್ರ ಗೃಹ ಕಾರ್ಯದರ್ಶಿ ಕರ್ನಾಟಕ ಮತ್ತು ಕೇರಳ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ, ಕೇರಳ ರೋಗಿಗಳಿಗೆ ಕರ್ನಾಟಕ ಪ್ರವೇಶಿಸಲು ನೀತಿ ರೂಪಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ವಿವರಿಸಿದರು.