ಕೈರೋ, ಮಾರ್ಚ್ 26, ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಹಲವು ಕಾರ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತರ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ.ಗುರುವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 18 ಜನರು ಮೃತಪಟ್ಟಿದ್ದು 12 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಈಜಿಪ್ಟ್ ನಲ್ಲಿ ರಾತ್ರಿ ಕರ್ಫ್ಯೂ ಜಾರಿಯಾದ ಕೆಲವೇ ಗಂಟೆಗಳ ನಂತರ ಈ ಅಪಘಾತ ಸಂಭವಿಸಿದೆ. ಕೊರೊನಾ ವೈರಾಣು ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಕಾಲಮಾನ ಸಂಜೆ 7 ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ವಿಧಿಸಿ ಅಲ್ಲಿನ ಸರ್ಕಾರ ಆದೇಶ ನೀಡಿತ್ತು. ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳ ನಂತರ ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.ಕರ್ಫ್ಯೂನಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಲು ಅನೇಕ ವಾಹನಗಳು ಸಾಲುಗಟ್ಟಿ ನಿಂತಿದ್ದಾಗ ವೇಗವಾಗಿ ಬಂದ ನಿರ್ಮಾಣ ಸಾಮಗ್ರಿ ಹೊತ್ತ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.