ಋಣಾತ್ಮಕ ಭಾವದಿಂದ ಹೊರಬನ್ನಿ: ಖೊದ್ನಾಪೂರ

Get rid of negativity: Khodnapur

ವಿಜಯಪುರ 17: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸನ್ನು ಗಳಿಸಲು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಓರೆಹಚ್ಚಿ ತಮ್ಮಲ್ಲಿರುವ ಕೀಳರಿಮೆ ಮನೋಭಾವನೆ, ಋಣಾತ್ಮಕ ಚಿಂತನೆಯನ್ನು ಹೋಗಲಾಡಿಸಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ನನ್ನಿಂದ ಸಾಧ್ಯವಿಲ್ಲ ಅಥವಾ ಆಗುವುದಿಲ್ಲ ಎಂಬ ನಕಾರಾತ್ಮಕ ಮನೋಭಾವನೆಯನ್ನು ತೊಲಗಿಸಬೇಕು. ೆ ಎಂದು ವಿಜಯಪುರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಪ್ರೊ. ಎಂ.ಎಸ್‌.ಖೊದ್ನಾಪೂರ ಹೇಳಿದರು.  

ಅವರು ದೇವರ ಹಿಪ್ಪರಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿ.15 ರಂದು ಜರುಗಿದ ಸಾಂಸ್ಕೃತಿಕ, ಕ್ರೀಡೆ, ಎನ್‌.ಎಸ್‌.ಎಸ್‌. ಚಟುವಟಿಕೆಗಳ ಸಮಾರೋಪ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.  

ಅವರು ಮಾತನಾಡುತ್ತಾ, ವಿದ್ಯಾರ್ಥಿ ಜೀವನ ಅತೀ ಅಮೂಲ್ಯವಾದದ್ದು, ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಾಗ ಸದಾ ಜ್ಞಾನವನ್ನು ಪಡೆಯಲು ಹಂಬಲ ಹೊಂದಿರಬೇಕು. ಕೇವಲ ಪದವಿ ಅಥವಾ ಅಂಕ ಪಡೆಯುವದು ಶಿಕ್ಷಣದ ಉದ್ದೇಶವಾಗಬಾರದು. ಕಲಿಕೆ ನಿಂತ ನೀರಾಗಬಾರದು. ಅದು ನಿರಂತರವಾಗಿದ್ದು, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಜಗತ್ತಿನಲ್ಲಿ ಪ್ರತಿಯೊಬ್ಬರೂ ಜನನಿ, ಶಿಕ್ಷಣ ನೀಡಿದ ಮಾತೃಸಂಸ್ಥೆ ಮತ್ತು ಬದುಕಲು ಆಶ್ರಯ ನೀಡಿದ ಜನ್ಮಭೂಮಿ ಇವುಗಳ ಋಣ ತೀರಿಸವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಎಲ್ಲ ಸಾಧಕರ ಜೀವನವನ್ನು ಗಮನಿಸಿದರೆ. ಪ್ರತಿಯೊಬ್ಬರು ಒಂದಿಲ್ಲವೊಂದು ಸಮಸ್ಯೆಯನ್ನು ಎದುರಿಸಿದ್ದಾರೆ. ಆದ್ದರಿಂದ ಸಮಸ್ಯೆಯನ್ನು ಎದುರಿಸುವ ಹಾಗೂ ಮುಂದಿನ ಗುರಿಯ ಸಾಧನೆಯತ್ತ ದಿಟ್ಟ ಹೆಜ್ಜೆ ಇಡುತ್ತಾ ಸಾಗಿದರೆ, ಸಾಧನೆ ಎಂಬುದು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಸಲಹೆ ನೀಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ. ಅಶೋಕ ಹೆಗಡೆ ಅವರು ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ, ಕಠಿಣ ಪರಿಶ್ರಮ, ನಿರಂತರ ಅಧ್ಯಯನ, ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸದೊಂದಿಗೆ ಉದಾತ್ತವಾದ ಗುರಿಯನ್ನು ಇಟ್ಟುಕೊಂಡು ಅದರ ಸಾಧನೆಯತ್ತ ಪ್ರಯತ್ನಶೀಲರಾಗಬೇಕು ಎಂದರು. ಪ್ರತಿಯೊಬ್ಬರಲ್ಲಿಯೂ ವಿಶಿಷ್ಟವಾದ ಪ್ರತಿಭೆ, ಜಾಣ್ಮೆ, ಕೌಶಲ್ಯ ಪ್ರಾವೀಣ್ಯತೆ, ನೈಪುಣ್ಯತೆ ಮತ್ತು ಸಾಮರ್ಥ್ಯಗಳಿರುತ್ತವೆ. ತಮ್ಮಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರಹಾಕಲು ದೊರೆಯುವ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉತ್ತಮ ಸಾಧನೆ ತೋರಬೇಕೆಂದು ಕಿವಿಮಾತು ಹೇಳಿದರು.  

ಸಮಾರಂಭದಲ್ಲಿ ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ಪ್ರಭುಲಿಂಗ ಪರುಗೊಂಡ ಕ್ರೀಡಾ ನಿರ್ದೇಶಕರಾದ ಪ್ರೊ. ಎಂ.ಎಂ.ಲಕ್ಷ್ಮೀಶ, ಪ್ಲೇಸಮೆಂಟ್ ಸೆಲ್ ಸಂಚಾಲಕಿ ಪ್ರೊ. ಪ್ರೇಮಕುಮಾರಿ, ಎನ್‌.ಎಸ್‌.ಎಸ್‌. ಸಂಚಾಲಕ ಪ್ರೊ. ಎಸ್‌.ಎಂ.ಜಾಲವಾದಿ, ರೆಡಕ್ರಾಸ ಘಟಕದ ಸಂಚಾಲಕಿ ಪ್ರೊ. ಪುಷ್ಪಾ ಹುಣಶ್ಯಾಳ, ಎಸ್‌.ಎಸ್‌. ಬಿರಾದಾರ ಇನ್ನಿತರರು ಸಹ ವೇದಿಕೆಯ ಮೇಲಿದ್ದರು. ಇದೇ ಸಂದರ್ಭದಲ್ಲಿ ಪ್ರೊ. ಎಂ.ಎಸ್‌.ಖೊದ್ನಾಪೂರ ಅವರನ್ನು ಸನ್ಮಾನಿಸಲಾಯಿತು.   

ಸಮಾರಂಭದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಿಭಾಗವು ಹಮ್ಮಿಕೊಂಡ ವಿವಿಧ ಸ್ಥರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಗಳನ್ನು ಹಾಗೂ ಸಾಧನೆಗೈದ ಕಾಲೇಜಿನ ಬಿ.ಎ ಮತ್ತು ಬಿ.ಕಾಂ 6 ನೇಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳು ಎಲ್ಲ ಪ್ರಾಧ್ಯಾಪಕರನ್ನು ಪ್ರೀತಿ ಮತ್ತು ಗೌರವದೊಂದಿಗೆ ಸನ್ಮಾನಿಸಿದರು.  

ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ಪ್ರಭುಲಿಂಗ ಪರುಗೊಂಡ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಈ ಸಮಾರಂಭದಲ್ಲಿ ಕಾಲೇಜಿನ ಅತಿಥಿ ಉಪನ್ಯಾಸಕರಾದ ಡಾ. ಎಸ್‌.ಬಿ.ಹೊನಮಟ್ಟಿ, ಯಾಸ್ಮೀನ ನದಾಫ, ಡಾ. ಎಸ್‌.ಎಸ್‌.ಶಿವಶರಣರ, ಪ್ರೊ. ಎಂ.ಎಸ್‌.ಪಾಟೀಲ ಇನ್ನಿತರರು ಸಹ ಉಪಸ್ಥಿತರಿದ್ದರು.  ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,