ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟಕ್ಕೆ ಗುಲ್ಮಾರ್ಗ್ ಆತಿಥ್ಯ

ಶ್ರೀನಗರ, ಮಾ.5,: ಕ್ರೀಡಾಭಿವೃದ್ಧಿಯ ರಾಷ್ಟ್ರೀಯ ಕಾರ್ಯಕ್ರಮವಾದ ಖೇಲೋ ಇಂಡಿಯಾ ಅಡಿಯಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಚಳಿಗಾಲದ ಕ್ರೀಡಾಕೂಟವು ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಮಾರ್ಚ್ 7ರಿಂದ 11ರವರೆಗೆ ನಡೆಯಲಿದೆ.ಹಿಮ ಸ್ಕೀಯಿಂಗ್, ಹಿಮ ಬೋರ್ಡಿಂಗ್, ಕ್ರಾಸ್ ಕಂಟ್ರಿ, ಹಿಮ ಪ್ರದರ್ಶನ, ಹಿಮ ಸೈಕ್ಲಿಂಗ್ ಮತ್ತು ಇತರ ಹಿಮಾಧರಿತ ಸ್ಪರ್ಧೆಗಳು ಸೇರಿದಂತೆ 30 ಸ್ಪರ್ಧೆಗಳಲ್ಲಿ ದೇಶಾದ್ಯಂತ 830 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.  ಇದಕ್ಕಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಆಟಗಾರರಿಗೆ ಹಾಗೂ ಸಂಬಂಧಪಟ್ಟವರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಸಿದ್ಧಗೊಂಡಿದೆ.ಸೌಲಭ್ಯ ಕೇಂದ್ರ ಆತಿಥ್ಯ ಮತ್ತು ಪ್ರೋಟೊಕಾಲ್ ಸೇವೆಗಳು, ಸಾರಿಗೆ, ಪ್ರಯಾಣ ಮತ್ತು ವಸತಿ, ವಸ್ತುಗಳು ಮತ್ತು ಸಲಕರಣೆ ಸಂಗ್ರಹಣೆ, ತಾಂತ್ರಿಕ ಅವಶ್ಯಕತೆಗಳು, ಪತ್ರಿಕಾ ಪ್ರಚಾರ, ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ, ಹಿಮದ ಇಳಿಜಾರುಗಳ ನಿರ್ವಹಣೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.ಬುಧವಾರ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಕಾಶ್ಮೀರದ ವಿಭಾಗೀಯ ಆಯುಕ್ತ ಬಸೀರ್ ಅಹ್ಮದ್, ಸ್ಪರ್ಧೆಗಳು ನಡೆಯುವ ಸ್ಥಳದಲ್ಲಿ ಎಲ್ಲ ಸಿದ್ಧತೆ ಕುರಿತು ಪರಾಮರ್ಶೆ ನಡೆಸಿದ್ದಾರೆ. ಜತೆಗೆ ಕೂಟ ಮುಗಿಯುವೆರೆಗೂ ತೀವ್ರ ನಿಗಾವಹಿಸುವಂತೆ ಸ್ಥಳೀಯ ಪೊಲೀಸ್ ಮತ್ತು ಎಸ್ ಡಿಆರ್ ಎಫ್ ಹಾಗೂ ಇತರ ಭದ್ರತಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.