ಮತ್ತಿಕೊಪ್ಪದ 28: ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೀಜ ಮೇಳವನ್ನು ಏರಿ್ಡಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಮಾತನಾಡಿ, ಪ್ರಸ್ತುತ ಕೃಷಿ ವ್ಯವಸ್ಥೆಯಲ್ಲಿ ಗುಣಮಟ್ಟದ ಬೀಜಗಳ ಲಭ್ಯತೆಯಿಲ್ಲದ ಕಾರಣ ವ್ಯವಸಾಯದಲ್ಲಿ ಕಡಿಮೆ ಇಳುವರಿಯಿಂದಾಗಿ ರೈತ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾನೆ. ಗುಣಮಟ್ಟದ ಬಿತ್ತನೆ ಬೀಜಗಳ ಬಳಕೆಯಿಂದ ರೈತನು ಉತ್ತಮ ಇಳುವರಿ ಹಾಗೂ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.
ಮುಂಗಾರು ಹಂಗಾಮು ಸದ್ಯದಲ್ಲೆ ಪ್ರಾರಂಭವಾಗಲಿದ್ದು ಗುಣಮಟ್ಟ ಬೀಜ ರೈತರಿಗೆ ದೊರೆಯುವಂತೆ ಮಾಡುವುದೇ ಬೀಜ ಮೇಳದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕೃಷಿ ವಿಜ್ಞಾನ ಕೇಂದ್ರವು ಮುಂಚೂಣಿಯಲ್ಲಿದೆ. ಕೃಷಿ ವಿಜ್ಞಾನ ಕೇಂದ್ರವು ಭಾರತ ಸರ್ಕಾರದ ಅನುದಾನದಡಿದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬೀಜ ಪೂರೈಕೆ ಹಾಗೂ ಅನೇಕ ತಂತ್ರಜ್ಞಾನದ ವರ್ಗಾವಣೆಯಿಂದ ರೈತರ ಆದಾಯವನ್ನು ಹೆಚ್ಚಿಸುವಲ್ಲಿ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ. ರೈತರು ಈ ಸಂಸ್ಥೆಯಲ್ಲಿರುವ ಅನುಭವಿ ವಿಜ್ಞಾನಿಗಳಿಂದ ತಂತ್ರಜ್ಞಾನದ ಮಾಹಿತಿ, ಬೀಜ ಹಾಗೂ ಇನ್ನಿತರ ಅನೇಕ ಪರಿಕರಗಳನ್ನು ಸಕಾಲಕ್ಕೆ ಪಡೆದು, ಅಧಿಕ ಆದಾಯ ಪಡೆಯಲು ಸಲಹೆ ನೀಡಿದರು. ಈ ದಿಸೆಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಉತ್ಪಾದಿಸಿದ ಸೋಯಾಬಿನ್ ಬೆಳೆಯ ಡಿಎಸ್‌ಬಿ-34, ಉದ್ದು ಬೆಳೆಯ-ಡಿಬಿಜಿವಿ-5 ತಳಿ ಹಾಗೂ ಈರುಳ್ಳಿ ಬೆಳೆಯ ಭೀಮಾ ಸೂಪರ್ ತಳಿಯನ್ನು ರೈತರಿಗೆ ಪೂರೈಸಲು ಬೀಜ ಮೇಳವನ್ನು ಆಯೋಜಿಸಿದೆ. ಆದ್ದರಿಂದ ರೈತರು ಈ ಕಾರ್ಯಕ್ರಮ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕೇಂದ್ರದ ಮಣ್ಣು ವಿಜ್ಞಾನಿ ಎಸ್. ಎಮ್. ವಾರದ ಮಣ್ಣು ಪರೀಕ್ಷೆ ಮಹತ್ವ ಹಾಗೂ ಬೇಳೆ ಹಾಗೂ ಎಣ್ಣೆ ಕಾಳು ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಕುರಿತು ವಿವರಿಸಿದರು. ಬೇಸಾಯ ಶಾಸ್ತ್ರ ವಿಜ್ಞಾನಿ ಜಿ. ಬಿ. ವಿಶ್ವನಾಥ ಸೋಯಾ ಅವರೆ, ತೊಗರಿ, ಹೆಸರು ಹಾಗೂ ಉದ್ದು ತಳಿಗಳು, ಲಕ್ಷಣಗಳು ಹಾಗೂ ಬೇಸಾಯ ಪದ್ಧತಿಗಳ ಬಗ್ಗೆ ಮಾತನಾಡಿದರು. ತೋಟಗಾರಿಕೆ ವಿಜ್ಞಾನಿ ಪ್ರವೀಣ ಯಡಹಳ್ಳಿ ಹಣ್ಣು ಮತ್ತು ತರಕಾರಿ ಬೆಳೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಂಕರಗೌಡ ಪಾಟೀಲ ಸ್ವಾಗತಿಸಿದರು. ವಿನೋದ ಕೋಚಿ ವಂದಿಸಿದರು. ಕಾರ್ಯಕ್ರಮದಲ್ಲಿ 80 ಕ್ಕೂ ಹೆಚ್ಚು ಜನ ರೈತರು ಭಾಗವಹಿಸಿದ್ದರು.