ದೇವರಹಿಪ್ಪರಗಿ, 29 : ಶರವೇಗದಲ್ಲಿ ಮುನ್ನುಗ್ಗುತ್ತಿರುವ ವಿಜ್ಞಾನ ಹಾಗೂ ತಂತ್ರಜ್ಞಾನದ ಇಂದಿನ ಯುಗದಲ್ಲಿ ಶಾಲಾ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ತಂತ್ರಜ್ಞಾನದ ಜ್ಞಾನ ತುಂಬಾ ಅತ್ಯವಶ್ಯಕವಾಗಿದೆ ಎಂದು ಮುಳಸಾವಳಗಿ ಗ್ರಾಮದ ಪ್ರೌಢಶಾಲಾ ಶಿಕ್ಷಕರಾದ ಎಸ್. ಬಿ.ಬಿರಾದಾರ ಅವರು ಹೇಳಿದರು.
ತಾಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಹೆಣ್ಣುಮಕ್ಕಳ ಶಾಲೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆಯನ್ನು ತಮ್ಮ ಸ್ನೇಹಿತರಾದ ಸಾಹೇಬಗೌಡ.ಶಿ. ಬಿರಾದಾರ ಅವರೊಂದಿಗೆ ಸುಮಾರು ನಲವತ್ತೈದು ಸಾವಿರ ರೂ ವೆಚ್ಚದಲ್ಲಿ ಮಾಡಿಸಿ ಅದರ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.
ವಿಜಯಪುರದ ಹನುಮಾನ್ ಮೋಟಾರ್ಸ್ ಮಾಲೀಕರಾದ ಸಾಹೇಬಗೌಡ.ಶಿ.ಬಿರಾದಾರ ಅವರು ಮಾತನಾಡಿ ನಾವೆಲ್ಲರೂ ಸರ್ಕಾರಿ ಶಾಲೆಯಲ್ಲಿಯೇ ಕಲಿತಿದ್ದು, ಸರ್ಕಾರಿ ಶಾಲೆಯ ಏಳಿಗೆಯ ದೃಷ್ಟಿಯಿಂದ ನಾವು ಶಾಲೆಗೆ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಿದ್ದೇವೆ, ಶಿಕ್ಷಕರಿಂದ ಅಗತ್ಯ ಮಾರ್ಗದರ್ಶನವನ್ನು ಪಡೆದು ಉತ್ತಮ ರೀತಿಯಲ್ಲಿ ಜ್ಞಾನಾರ್ಜನೆಯನ್ನು ಪಡೆದು ಸರ್ಕಾರಿ ಶಾಲೆಗಳ ಉನ್ನತಿಗೆ ಕಾರಣರಾಗಬೇಕೆಂದು ತಿಳಿಸಿದರು.
ಶಾಲೆಯ ಸಿಬ್ಬಂದಿ ವರ್ಗದವರೊಂದಿಗೆ ಸೇರಿ ಸ್ಮಾರ್ಟ್ ಕ್ಲಾಸ್ ನ್ನು ಉದ್ಘಾಟನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಶರಣು ಹೊಸಮನಿಯವರು ಶಾಲಾಭಿವೃದ್ದಿಗೆ ಹತ್ತುಸಾವಿರ ರೂ ದೇಣಿಗೆ ನೀಡಿದರು.ಮುಳಸಾವಳಗಿ ಸಿ ಆರ್ ಪಿ ಎಸ್.ಎಮ್. ರೋಡಗಿ, ಮುಖ್ಯಗುರು ಎಸ್. ಆರ್. ಪಾಟೀಲ, ಶಿಕ್ಷಣ ಇಲಾಖೆಯಿಂದ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಕೆ.ಹೊಸಮನಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಹಶಿಕ್ಷಕರಾದ ರಾಜಶೇಖರ ಸನಕಿ, ಮಲ್ಲಣ್ಣ ಬಿರಾದಾರ, ರಾಜಕುಮಾರ ರಾಠೋಡ, ದಾನಮ್ಮ.ಎಸ್. ನಾಗರಳ್ಳಿ, ಮಹಾದೇವಿ.ಎಸ್. ಪಾಟೀಲ, ವಿಜಯಾ ಬಿರಾದಾರ, ವಿಜಯಲಕ್ಷ್ಮಿ ಗೌಡರ, ಹಣಮಂತ ನಾಯ್ಕೋಡಿ ಸೇರಿದಂತೆ ಮಕ್ಕಳು ಉಪಸ್ಥಿತರಿದ್ದರು.