ಕರ್ತಾಪುರ್ ಸಾಹಿಬ್ ಗುರುದ್ವಾರಕ್ಕೆ ನ 9 ರಂದು ಮನಮೋಹನ್ ಸಿಂಗ್ ಭೇಟಿ

ನವದೆಹಲಿ, ಅ 4:   ಸಿಖ್ ಸಮುದಾಯದ ಧರ್ಮ ಗುರು, ಗುರು ನಾನಕ್ ಜಯಂತಿಗಾಗಿ  ಪಾಕಿಸ್ತಾನದಲ್ಲಿರುವ ಕರ್ತಾಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ  ಅಮರೀಂದರ್ ಸಿಂಗ್ ನೀಡಿದ  ಆಹ್ವಾನವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಒಪ್ಪಿಕೊಂಡಿದ್ದಾರೆ.   ಅಮರೀಂದರ್ ಸಿಂಗ್ ನಿನ್ನೆ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದರು. ಗುರುದ್ವಾರಕ್ಕೆ ಸರ್ವಪಕ್ಷ ನಿಯೋಗ ನವೆಂಬರ್ 9 ರಂದು ಭೇಟಿ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆವರಿಗೂ ಸಮಾರಂಭಕ್ಕೆ ಆಹ್ವಾನ ನೀಡಲಾಗಿದೆ ಎಂದು ಅಮರೀಂದರ್ ಸಿಂಗ್ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮನಮೋಹನ್ ಸಿಂಗ್ ಅವರು ನವೆಂಬರ್ 12ರಂದು ಸುಲ್ತಾನಪುರ್ ಲೋಧಿಯಲ್ಲಿ ನಡೆಯಲಿರುವ ಗುರುನಾನಕ್ ಅವರ 550ನೇ ಜನ್ಮದಿನಾಚರಣೆ ಸಮಾರಂಭದಲ್ಲೂ ಭಾಗವಹಿಸಲಿದ್ದಾರೆ. ಕರ್ತಾಪುರ್ ಕಾರಿಡಾರ್ ಉದ್ಘಾಟನೆಗಾಗಿ  ಮನಮೋಹನ್ ಸಿಂಗ್ ಅವರನ್ನು  ಆಹ್ವಾನಿಸಲಾಗುವುದೆಂದು ಕಳೆದ ವಾರ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಈ ಮೊದಲು ಹೇಳಿದ್ದರು.  ಆದರೆ ಇದನ್ನು ಸಿಂಗ್ ಅವರು ನಿರಾಕರಿಸಿದ್ದರು.