ಮುದ್ದೇಬಿಹಾಳ: ವಿದ್ಯಾರ್ಥಿಗಳಿಗೆ ಕಂಟಕವಾದ ಸಮಸ್ಯೆಗಳು

ಲೋಕದರ್ಶನ ವರದಿ

ಮುದ್ದೇಬಿಹಾಳ 14: ವಿವಾದದಲ್ಲೇ ಪ್ರಾರಂಭಗೊಂಡಿರುವ ಇಲ್ಲಿನ ಮೊರಾರ್ಜಿ  ದೇಸಾಯಿ ಅಲ್ಪಸಂಖ್ಯಾತರ ಇಂಗ್ಲಿಷ್ ಮೀಡಿಯಂ ವಸತಿ ಶಾಲೆ (ಇಣಚಗಲ್)ಗೆ ಸಮಸ್ಯೆಗಳೇ ಕಂಟಕವಾಗಿ ಕಾಡತೊಡಗಿದ್ದು ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು, ಅಧಿಕಾರಿ ವರ್ಗದವರನ್ನು ಕಂಗೆಡಿಸಿದಂತಾಗಿದೆ. 

ಸದ್ಯ ಮಹಾರಾಷ್ಟ್ರದಲ್ಲಿ ವಾಸವಾಗಿರುವ ಮುದ್ದೇಬಿಹಾಳ ತಾಲೂಕಿನ ಇಣಚಗಲ್ನ ನಿವೃತ್ತ ನ್ಯಾಯಾಧೀಶ, ಕನ್ನಡಿಗ ಜಿ.ಡಿ.ಇನಾಮದಾರ ಅವರು 4-5 ವರ್ಷಗಳ ಹಿಂದೆ ತಮ್ಮೂರಿಗೆ ಏನಾದರೂ ಕೊಡುಗೆ ನೀಡಬೇಕೆಂದು ತೀರ್ಮಾನಿಸಿ ಅತಿ ಹಿಂದುಳಿದ ಆ ಭಾಗದ ಬಡಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತಮ್ಮ ಸ್ವಂತ ಜಮೀನು ದಾನ ನೀಡಲು ಮುಂದೆ ಬಂದು ಆಗಿನ ಸಕರ್ಾರದ ಮನಮೊಲಿಸಿ ಈ ಶಾಲೆಯನ್ನು ಮಂಜೂರು ಮಾಡಿಸಿಕೊಂಡಿದ್ದರು. 

ಸಕರ್ಾರದ ಮಂಜೂರಾತಿ ದೊರಕಿದ ಮೇಲೆ ಇಲ್ಲಿನ ಮಾರುತಿನಗರದಲ್ಲಿ ತಾತ್ಕಾಲಿಕವಾಗಿ ಶಾಲೆ ಪ್ರಾರಂಭಿಸಲಾಗಿತ್ತು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮಾನದಂಡಗಳ ಅನುಸಾರವೇ ಮಕ್ಕಳನ್ನು ಪ್ರವೇಶ ಪರೀಕ್ಷೆ ಮೂಲಕ ದಾಖಲು ಮಾಡಿಕೊಳ್ಳಲಾಗಿತ್ತು. ಕೆಲ ರಾಜಕೀಯ ಕಾರಣಗಳಿಗಾಗಿ ಪ್ರಾರಂಭದಲ್ಲೇ ಶಾಲೆ ವಿವಾದಕ್ಕೆ ಸಿಲುಕಿಕೊಂಡಿತು. ಆಗ ಶಾಸಕರಾಗಿದ್ದ ಸಿ.ಎಸ್. ನಾಡಗೌಡ ಅವರು ಶಾಲೆಯನ್ನು ಇಣಚಗಲ್ನಿಂದ ಬೇರೆ ಕಡೆ ಸ್ಥಳಾಂತರಗೊಳಿಸಿದ್ದರು. ಇದಕ್ಕೆ ನ್ಯಾ| ಇನಾಮದಾರ ಅವರು ತಡೆಯೊಡ್ಡಿ ಕಾನೂನು ಹೋರಾಟ ನಡೆಸಿ ಈ ಶಾಲೆಯನ್ನು ಉಳಿಸಿಕೊಂಡಿದ್ದರು. 

ಸಮಸ್ಯೆಗಳೇನು?: 

ಈ ಕಟ್ಟಡಕ್ಕೆ ಮೂಲ ಸೌಕರ್ಯಗಳ ಕೊರತೆ ಇದೆ. ಮಕ್ಕಳಿಗೆ ಶೌಚಾಲಯ ವ್ಯವಸ್ಥೆ ಸರಿಯಾಗಿಲ್ಲ. ಶಾಲಾ ಆವರಣದಲ್ಲಿನ ಬೋರ್ವೆಲ್ ನೀರನ್ನು ಬಳಸಲಾಗುತ್ತಿದೆ. ಪ್ರಾರಂಭದಲ್ಲಿ ಈ ನೀರನ್ನುಫಿಲ್ಟರ್ ಮಾಡಿ ಕುಡಿಯಲು ಬಳಸಲಾಗುತ್ತಿತ್ತು. ಈಗ 2 ದಿನಗಳಿಂದ ಈ ವ್ಯವಸ್ಥೆ ಬದಲಾಯಿಸಿ ಶುದ್ಧ ಘಟಕದಿಂದ ನೀರು ತಂದು ಕುಡಿಯಲು ಕೊಡಲಾಗುತ್ತಿದೆ. ಅಡುಗೆ ಕೋಣೆಯಲ್ಲಿ ನೈರ್ಮಲ್ಯ ಅನ್ನುವುದು ಎಲ್ಲೂ ಕಂಡು ಬರುವುದಿಲ್ಲ. ಕಾರಿಡಾರ್ನಲ್ಲಿ ಅಕ್ಕಿ ಸ್ವತ್ಛಗೊಳಿಸುತ್ತಿದ್ದು ಅಲ್ಲಿ ಚಪ್ಪಲಿ ಧರಿಸಿದವರು ತಿರುಗಾಡುವುದರಿಂದ ಚಪ್ಪಲಿಗಂಟಿದ ಧೂಳು, ಮಣ್ಣಿನ ಕಣ ಅಕ್ಕಿ ಸೇರಿಕೊಳ್ಳುತ್ತದೆ. ಮಕ್ಕಳಿಗೋಸ್ಕರ ತಯಾರಿಸಿರುವ ಊಟದ ಮೆನುವಿನ ಪ್ರಕಾರ ಊಟ ಬಡಿಸುವುದಿಲ್ಲ. ಪೌಷ್ಟಿಕಾಂಶ ಇರುವ ಆಹಾರ, ಹಸಿರು ಪಲೆತ, ತರಕಾರಿ ಬಳಕೆ ಕಡಿಮೆ ಇದೆ. ಮಕ್ಕಳಿಗೆ ಬದನೆಕಾಯಿ, ಆಲೂಗಡ್ಡೆ ಮಾತ್ರ ಯಥೇತ್ಛವಾಗಿ ಕೊಡಲಾಗುತ್ತದೆ. ಅನೇಕ ಬಾರಿ ಕೊಳೆತ ಟೊಮೇಟೋ, ಹಸಿ ಮೆಣಸಿನಕಾಯಿ, ತರಕಾರಿ ಬಳಸುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಕಂಡು ಬಂದಿವೆ. 

ಮಕ್ಕಳಿಗೆ ಮಲಗಲು ಸೂಕ್ತ ವ್ಯವಸ್ಥೆ ಇಲ್ಲ. ಚಳಿಗಾಲದಲ್ಲಿ ಸ್ನಾನಕ್ಕೆ ಬಿಸಿನೀರು ಕೊಡುತ್ತಿರಲಿಲ್ಲ. ಸಮಸ್ಯೆ ಕಂಡು ಬಂದ ಮೇಲೆ ಇದೀಗ ಬಿಸಿನೀರನ್ನು ಪ್ರಾರಂಭಿಸಲಾಗಿದೆ. 198 ಮಕ್ಕಳಿಗೆ ಮೂವರು ಅಡುಗೆಯವರು ಮಾತ್ರ ಇರುವುದರಿಂದ ಎಲ್ಲರಿಗೂ ಗುಣಮಟ್ಟದ ಊಟ ಮಾಡಿ ಬಡಿಸುವುದು ಸಾಧ್ಯವಾಗುತ್ತಿಲ್ಲ. ತಯಾರಿಸಿದ ಆಹಾರದಲ್ಲೇ ಕೆಲ ಪ್ರಮಾಣವನ್ನು ಅಡುಗೆಯವರು ಕದ್ದು ಮನೆಗೆ ಒಯ್ಯುತ್ತಿರುವುದು ಮಕ್ಕಳ ಊಟದ ಸಮಸ್ಯೆಯ ಗಂಭೀರತೆಗೆ ದಾರಿ ಮಾಡಿಕೊಟ್ಟಂತಾಗಿದೆ. ವಾರ್ಡನ್ ನಿಂಗನಗೌಡ ಪಾಟೀಲಗೆ ನಿಡಗುಂದಿ ಸೇರಿ ಮೂರು ಶಾಲೆಗಳ ಇನ್ಚಾಜರ್್ ಇರುವುದರಿಂದ ಈ ಮಕ್ಕಳ ಬಗ್ಗೆ ವೈಯುಕ್ತಿಕ ಕಾಳಜಿ ವಹಿಸುವುದು ಅವರಿಂದ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ಹೇಳಬೇಕೆಂದರೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಒದಗಿಸಿಕೊಡುವಲ್ಲಿ ನಿರ್ಲಕ್ಷ್ಯ ಇಲ್ಲಿ ಎದ್ದು ಕಾಣುತ್ತಿದೆ. 

ಇದನ್ನರಿತ ವೈದ್ಯರು ತಂಡೋಪತಂಡವಾಗಿ ಶಾಲೆಗೆ ಧಾವಿಸಿ ಮಕ್ಕಳಿಗೆ ಚಿಕತ್ಸೆ ನೀಡುವಲ್ಲಿ ತೊಡಗಿಕೊಂಡಿದ್ದಾರೆ. ಜಿಲ್ಲಾ, ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳೂ ಶಾಲೆಗೆ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಿದ್ದಾರೆ. ಗಂಭೀರತೆ ಅರಿತು ಆತಂಕಕ್ಕೀಡಾಗಿರುವ ಕೆಲ ಪಾಲಕರು ತಮ್ಮ ಮಕ್ಕಳನ್ನು ಮನೆಗೆ ಕರೆದೊಯ್ಯತೊಡಗಿದ್ದಾರೆ.