ರೈತರ ಹೊಸ ಸಾಲ ಮನ್ನಾ ಇಲ್ಲಾ : ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ

ಬೆಳಗಾವಿ,ಅ 16:       ಉಪ ಚುನಾವಣೆಯಲ್ಲಿ 15 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದ್ದು, ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಾಷ್ಟ್ರೀಯ ನಾಯಕರ ಜೊತೆ ಚರ್ಚಿಸಿ, ಟಿಕೆಟ್ ಅಂತಿಮ ಗೊಳಿಸಲಾಗುವುದು ಎಂದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಹೇಳಿದರು.    

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅಪ್ರಚಾರಕ್ಕೆ ಯಾವುದೇ ಅವಕಾಶ ಕೊಡುವ ಅಗತ್ಯವಿಲ್ಲ.ಅಕ್ಟೋಬರ್ 22ಕ್ಕೆ ಸುಪ್ರೀಂಕೋರ್ಟ್ ಏನು ತೀಪು ಬರುತ್ತದೆ ಎನ್ನುವುದನ್ನು ನೋಡಿಕೊಂಡು ಬಳಿಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸ ಲಾಗುತ್ತದೆ.ಈ ಉಪಚುನಾವಣೆ ಪಕ್ಷ ಹಾಗೂ ಸರ್ಕಾರಕ್ಕೆ ಬಹಳ ಮಹತ್ವದ್ದು.ಈ ಹಿನ್ನೆಲೆ ಯಲ್ಲಿ ಪ್ರತಿ ಕ್ಷೇತ್ರಕ್ಕೆ ಓರ್ವ ಸಚಿವರನ್ನು ಉಸ್ತು ವಾರಿಗಳನ್ನಾಗಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.    

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಗೊಂದಲ ಇಲ್ಲ.ಇದರಿಂದ ಯಾರೂ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.ನಾವು 15 ಸ್ಥಾನಗಳನ್ನು ಗೆಲ್ಲುವುದು ಸತ್ಯ ಎಂದರು.ನೂರಕ್ಕೆ ನೂರಷ್ಟು ಉಪ ಚುನಾವಣೆಯಲ್ಲಿ ನಾವು ಗೆಲುತ್ತೇವೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.     

ರಾಜ್ಯ  ಸರ್ಕಾರದ ಮುಂದೆ ಹೊಸ ಸಾಲಮನ್ನಾ ಮಾಡುವ ವಿಚಾರ ಇಲ್ಲ.ಆದರೆ ಹಿಂದಿನ ಸರ್ಕಾರ ಮಾಡಿದ ಸಾಲಮನ್ನಾ ಯೋಜನೆಯಲ್ಲಿ ಬಾಕಿ ಉಳಿದಿದ್ದರೆ ಅದನ್ನು ಪೂರ್ಣ ಗೊಳಿಸಲಾಗುವದು.ಈಗ ನೆರೆ ಹಾವಳಿ ಸಂತ್ರಸ್ತರಿಗೆ ದೊಡ್ಡ ಮಟ್ಟದಲ್ಲಿ ಪರಿಹಾರ ನೀಡ ಲಾಗುತ್ತಿದೆ.ಹೀಗಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಅನುದಾನವನ್ನು ಎಲ್ಲ ಕಡೆಯಿಂದ ಬೇರೆಡೆಗೆ ವರ್ಗಾವಣೆ ಮಾಡಿ ಕೊಡುತ್ತಿದ್ದೇವೆ ಎಂದರು.    

ಸದ್ಯ ಸಂತ್ರಸ್ತರಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸುತ್ತೇವೆ.ಹೊಸದಾಗಿ ಸಾಲಮನ್ನಾ ಮಾಡುವಂತಹ ಪರಿಸ್ಥಿತಿ ಇಲ್ಲ.ಅಂತರ ರಾಜ್ಯದ ಮಧ್ಯೆ ನೀರಾವರಿ ಸಮಸ್ಯೆ ಬಗೆಹರಿಸಲು ನಮ್ಮ ಆದ್ಯತೆಯಾಗಿದೆ.ಈ ಚುನಾವಣೆ ಮುಗಿದ ಬಳಿಕ ಮಹಾದಾಯಿ ಸೇರಿ ಎಲ್ಲ ರೀತಿ ಯಿಂದ ನೀರಾವರಿ ಸಮಸ್ಯೆ ಇತ್ಯರ್ಥಕ್ಕೆ ಪ್ರಥಮ ಆದ್ಯತೆ ಕೊಡುತ್ತೇವೆ.ಹೆಲಿಕಾಪ್ಟರ್ ತಡವಾಗಿದ್ದರಿಂದ ಹೋಗುವುದಕ್ಕೆ ವಿಳಂಬ ಆಗುತ್ತಿದೆ.ಮಹಾರಾಷ್ಟ್ರದಲ್ಲಿ ಇಂದಿನಿಂದ ಚುನಾವಣೆ ಪ್ರಚಾರ ಆರಂಭಿಸುವೆ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.    

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳಲು ಮಹಾರಾಷ್ಟ್ರಕ್ಕೆ ತೆರಳಲು ಮಂಗಳವಾರವೇ ಬೆಳಗಾವಿ ತಲುಪಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಹಾರಾಟಕ್ಕೆ ಅಡ್ಡಿ ಉಂಟಾಗಿರುವ ಕಾರಣ, ಮಹಾರಾಷ್ಟ್ರಕ್ಕೆ ತೆರಳುವುದೋ ಅಥವಾ ಬೆಂಗಳೂರಿಗೆ ಮರಳುವುದೋ ಎಂದು ಗೊಂದಲಕ್ಕೀಡಾಗಿದ್ದಾರೆ.    

ಬೆಳಗಾವಿಯ ಸರ್ಕ್ಯೂಟ್ ಹೌಸ್ನಲ್ಲಿ ತಂಗಿದ್ದ ಮುಖ್ಯಮಂತ್ರಿ ಬುಧವಾರ ಬೆಳಗ್ಗೆ ಯೇ ಮಹಾರಾಷ್ಟ್ರಕ್ಕೆ ತೆರಳಬೇಕಿತ್ತು. ಆದರೆ, ಸೂಕ್ತ ಸಮಯದಲ್ಲಿ ಹೆಲಿಕಾಪ್ಟರ್ ವ್ಯವಸ್ಥೆ ಆಗಿರಲಿಲ್ಲ.ಈ ಹಿನ್ನೆಲೆಯಲ್ಲಿ ಸಿಡಿಮಿಡಿಗೊಂಡ ಅವರು ಉಪ ಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ ಅವರಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಮಹಾರಾಷ್ಟ್ರ ಪ್ರವಾಸ ರದ್ದುಗೊಳಿಸಿ, ಬೆಂಗಳೂರಿಗೆ ಮರಳುವುದಾಗಿ ಎಚ್ಚರಿಕೆ ನೀಡಿದರು.    

ಬೆಂಗಳೂರಿಗೆ ಮರಳದೆ ಮಹಾರಾಷ್ಟ್ರಕ್ಕೆ ಬರುವಂತೆ ಲಕ್ಷ್ಮಣ್ ಸವದಿ ಮನವಿ ಮಾಡಿಕೊಂಡರು.ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಮರಳುವ ಬದಲು ಮಹಾ ರಾಷ್ಟ್ರಕ್ಕೆ ತೆರಳಲು ನಿರ್ಧರಿಸಿದ ಮುಖ್ಯಮಂತ್ರಿ ಸದ್ಯ ಸರ್ಕ್ಯೂಟ್ಹೌಸ್ನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದರು.   

ಜಿಲ್ಲಾಡಳಿತದ ಮಾಹಿತಿ ಪ್ರಕಾರ ಬುಧವಾರ ಮಧ್ಯಾಹ್ನ 12.30ರವರೆಗೆ ಸಾಂಬ್ರಾ ವಿಮಾನ ನಿಲ್ದಾಣದಿಂದ ಯಾವುದೇ ಹೆಲಿಕಾಪ್ಟರ್ ಸೇವೆ ಲಭಿಸುವುದು ಅನು ಮಾನವಾಗಿದೆ.ಅದಕ್ಕೂ ಮುನ್ನವೇ ಮುಖ್ಯಮಂತ್ರಿಗೆ ಹೆಲಿಕಾಪ್ಟರ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಮತ್ತು ಪೊಲೀಸರು ಪರದಾಡುತ್ತಿದ್ದಾರೆ ಎನ್ನಲಾಗಿದೆ.