“ಪುಟ್ಟಣ್ಣನ ಕತ್ತೆ” ಚಲನಚಿತ್ರದ ಪೋಸ್ಟರ್ ಬಿಡುಗಡೆ
ಬೆಂಗಳೂರು 30: “ದಾರಿ ಯಾವುದಯ್ಯ ವೈಕುಂಠಕೆ” ಚಿತ್ರವನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ “ಸಿದ್ದು ಪೂರ್ಣಚಂದ್ರ” ಸದಾ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ‘ಬ್ರಹ್ಮಕಮಲ’, ‘ತಾರಿಣಿ’, ‘ಈ ಪಾದ ಪುಣ್ಯಪಾದ’ ದಂಥ ವಿಶಿಷ್ಠ ಕಥಾಚಿತ್ರಗಳನ್ನು ನೀಡಿದ್ದು ಇವುಗಳ ಸಾಲಿಗೆ ಇದೀಗ “ಪುಟ್ಟಣ್ಣನ ಕತ್ತೆ” ಎಂಬ ಹೊಸ ಚಲನಚಿತ್ರವೂ ಸೇರಿಕೊಳ್ಳುತ್ತಿದೆ. ನಿರ್ದೇಶಕರ ಜನುಮದಿನದಂದು ಚಿತ್ರತಂಡ “ಪುಟ್ಟಣ್ಣನ ಕತ್ತೆ” ಪೋಸ್ಟರ್ ಬಿಡುಗಡೆ ಮಾಡಿದೆ. ಮೊದಲ ಪೋಸ್ಟರ್ನಲ್ಲಿ ಕತ್ತೆಯನ್ನು ತೋರಿಸಿರುವುದು ಚಿತ್ರದ ಶುಭ ಸೂಚನೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಮುಂದಿನ ಪೋಸ್ಟರ್ನಲ್ಲಿ ಕಲಾವಿದರನ್ನು ತೋರಿಸಲಾಗುತ್ತದೆ ಎಂದು ನಿರ್ದೇಶಕರು ತಿಳಿಸಿದರು. ಎಲ್ಲರು ನಾಯಿ ಮೇಲೆ ಚಿತ್ರ ಮಾಡಿದರೆ ನಾನ್ಯಾಕೆ ಕತ್ತೆ ಮೇಲೆ ಕತೆ ಬರೆದು ಚಿತ್ರ ಮಾಡಬಾರದು ಅಂತ ಐಡಿಯಾ ಬಂದಾಗ ಈ ಕಥೆ ಹೊಳೆಯಿತು. ಈ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಮನುಷ್ಯರ ಜೊತೆ ಕತ್ತೆಯನ್ನು ಬಳಸಲಾಗಿದೆ. ನಮ್ಮೆಲ್ಲರಿಗೂ ಕತ್ತೆಯ ಜೊತೆಗಿನ ಒಡನಾಟ ಹೊಸದು, ಅದರ ಮನಸ್ಥಿತಿ ನೋಡಿಕೊಂಡು ಮೊದಲ ಹಂತದ ಚಿತ್ರೀಕರಣ ಮಾಡಿದೆವು. ಮುಂದಿನ ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಯುತ್ತಿದೆ. ಪ್ರಾರಂಭದಲ್ಲಿ ಕಷ್ಟವೆಸಿದರೂ ಒಂದೆರಡು ದಿನಗಳಲ್ಲಿ ಕತ್ತೆಯೂ ನಮ್ಮೊಂದಿಗೆ ಸಹಕರಿಸಿದ್ದು ವಿಶೇಷ. ಇದಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡುತಿದ್ದೇನೆಂದು “ಸಿದ್ದು ಪೂರ್ಣಚಂದ್ರ” ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ಪೂರ್ಣಚಂದ್ರ ಫಿಲಂಸ್’ಲಾಂಛನದಲ್ಲಿ ಬರುತ್ತಿರುವ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅನಿಶ್ ಆರ್ಯನ್, ಭೀಮೇಶ್ ಅಭಿನಯಿಸಿದ್ದಾರೆ. ಉಳಿದಂತೆ ಕಲಾರತಿ ಮಹದೇವ್, ಸಿದ್ದು ಮಂಡ್ಯ, ರಶ್ಮಿ ಮೈಸೂರ್, ಬಾಬು, ರೋಹಿಣಿ, ಎನ್ ಟಿ ರಾಮಸ್ವಾಮಿ, ಲಕ್ಕಿ ಶಂಕರ್, ಶೃತಿ ಗಗನ, ಸೌಮ್ಯ, ಕವಿತಾ ಕಂಬಾರ್, ಲಿಯೋ ಶರ್ಮ, ವಿಭಾ ವಂದನ್ ಮುಂತಾದವರು ಅಭಿನಯಿಸುತ್ತಿದ್ದಾರೆ. ಛಾಯಾಗ್ರಾಹಣ ರಾಜು ಹೆಮ್ಮಿಗೇಪುರ, ಸಂಕಲನ ದೀಪು, ಸಂಗೀತ ಅನಂತ್ ಆರ್ಯನ್, ಸಿಂಕ್ ಸೌಂಡ್ ಕೃಷ್ಣಮೂರ್ತಿ , ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ಈ ಚಿತ್ರಕ್ಕೆ ಇದೇ ಮೊದಲ ಬಾರಿಗೆ “ತನ್ಮಯ್ ಎಸ್ ಗೌಡ” ಬಂಡವಾಳ ಹೂಡಿದ್ದಾರೆ.