ಡೆಂಗಿ ತಡೆಗೆ ಸಾರ್ವಜನಿಕರ ಸಹಕಾರ, ಸಹಭಾಗಿತ್ವ ಬಹಳ ಮುಖ್ಯ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Public cooperation and participation are very important to prevent dengue: MLA Basanagouda Patil Yat

ವಿಜಯಪುರ 20: ಡೆಂಗೀ ರೋಗವು ಈಡಿಸ್ ಈಜಿಪ್ಟಿ ಸೊಳ್ಳೆ ಕಚ್ಚುವದರಿಂದ ಬರುವ ಖಾಯಿಲೆಯಾಗಿದ್ದು, ಈ ಡೆಂಗೀ ತೆಡೆಗೆ ಆರೋಗ್ಯ ಇಲಾಖೆ ಜೊತೆಗೆ ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವ ಬಹಳ ಮುಖ್ಯವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಹೇಳಿದರು. 

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ಸಿದ್ದಾರ್ಥ ನಗರ ಡಯಟ್ ರಸ್ತೆ ಕಾಲನಿಯ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರಾಷ್ಟ್ರೀಯ ಡೆಂಗೀ ದಿನಾಚಾರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ  ಡಾ. ಸಂಪತ್ತ.ಎಮ್ ಗುಣಾರಿ ಮಾತನಾಡಿ, ಜಿಲ್ಲೆಯಲ್ಲಿ ಡೆಂಗೀ ರೋಗದ ನಿಯಂತ್ರಂಣಕ್ಕಾಗಿ ಆರೋಗ್ಯ ಇಲಾಖೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವರ್ಷದ ಘೋಷವಾಕ್ಯ ಡೆಂಗಿ ಸೋಲಿಸಲು ಹೆಜ್ಜೆಗಳು: ಪರೀಶೀಲಿಸಿ, ಸ್ವಚ್ಚಗೊಳಿಸಿ, ಮುಚ್ಚಿಡಿ ಎಂಬ ಧ್ಯೇಯದಂತೆ ಡೆಂಗ್ಯೂ ರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ಹೇಳಿದರು. 

 ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಜಾನ್ ಕಟವಟಿ ಮಾತನಾಡಿ ಈ ಡೆಂಗ್ಯು ರೋಗವು ಈಡಿಸ್ ಈಜಿಪ್ತ ಹೆಣ್ಣು ಸೊಳ್ಳೆಯಿಂದ ಹರಡುತ್ತಿದ್ದು, ರೋಗದ ಲಕ್ಷಣಗಳಾದ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ವಸಡುಗಳಿಂದ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ಇಂತಹ ಲಕ್ಷಣಗಳು ಕಂಡು ಬಂದರೆ, ಹತ್ತಿರದ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಲು ತಿಳಿಸಿದರು. ತೆಂಗಿನ ಚಿಪ್ಪು, ಸಿಮೆಂಟ ತೊಟ್ಟು ಮುಂತಾದ ನೀರಿನ ಶೇಖರಣೆಗಳಲ್ಲಿ ಉತ್ಪತ್ತಿಯಾಗುವದರಿಂದ ಇವುಗಳ ನಿಯಂತ್ರಣ ನಿಮ್ಮ ಕೈಯಲ್ಲಿದೆ. ನೀರಿನ ಶೇಖರಣೆಗಳನ್ನು ವಾರಕ್ಕೊಮ್ಮೆ ಒಂದು ಸಲ ತಿಕ್ಕಿ ತೊಳೆದು, ಒಣಗಿಸಿ, ಮುಚ್ಚಿಡಲು ತಿಳಿಸಿ, ಪ್ರತಿಯೊಬ್ಬರು ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ನೀರು ನಿಲ್ಲದಂತೆ ನೋಡಿಕೊಳ್ಳಲು ಮನವಿಯನ್ನು ಮಾಡಿದರು. 

ಡಿ.ವ್ಹಿ.ಬಿ.ಡಿ.ಸಿ ಕಛೇರಿ ಸಿಬ್ಬಂದಿಗಳು, ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.