ಕಾರವಾರ 29: ನಕಲಿ ಐಎಸ್ಐ ಗುರುತು ಮತ್ತು ಪರವಾನಗಿ ಸಂಖ್ಯೆಯನ್ನು ಹೊಂದಿದ್ದ ಕಾರವಾರದ ಗ್ಯಾಲಕ್ಸಿ ಪ್ಲೈವುಡ್ ಅಂಡ್ ಹಾರ್ಡವೇರ್ ಸಂಸ್ಥೆಯ ಮೇಲೆ ಹುಬ್ಬಳ್ಳಿಯ (ಬಿಐಎಸ್) ಶಾಖೆಯ ಉಪ ನಿರ್ದೇಶಕ ಎಂ. ಪ್ರದೀಪಕುಮಾರ್ ಮತ್ತು ಸಹಾಯಕ ನಿರ್ದೇಶಕ ಅಶುತೋಷ್ ಅಗರವಾಲ್ ನೇತೃತ್ವದ ತಂಡವು ಬುಧವಾರ ದಾಳಿ ನಡೆಸಿದೆ.
ಈ ಸಮಯದಲ್ಲಿ ಪ್ಲೈವುಡ್ ಹಾಳೆಗಳ ಮೇಲೆ ಐಎಸ್ಐ ಗುರುತಿನ ಅನಧಿಕೃತ ಬಳಕೆಯನ್ನು ಪತ್ತೆ ಹಚ್ಚಿದ್ದು, ದಾಳಿಯಲ್ಲಿ ನಕಲಿ ಐಎಸ್ಐ ಗುರುತು ಮತ್ತು ಪರವಾನಗಿ ಸಂಖ್ಯೆಯನ್ನು ಹೊಂದಿರುವ ಮೆರೈನ್ ಪ್ಲೈವುಡ್ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಸಂಸ್ಥೆಯು ಬಿಎಸ್ಐ ನಿಂದ ಮಾನ್ಯ ಪ್ರಮಾಣ ಪತ್ರವಿಲ್ಲದೆ ನಕಲಿ ಪರವಾನಗಿ ಸಂಖ್ಯೆಯನ್ನು ಬಳಸಿಕೊಂಡು ಐಎಸ್ಐ ಗುರುತಿನ ಟ್ಯಾಗ್ ಹೊಂದಿದ ಉತ್ಪನಗಳನ್ನು ಮಾರಾಟ ಮಾಡುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎಸ್ಐ ಗುರುತಿನ ಇಂತಹ ದುರುಪಯೋಗವು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ ಆಕ್ಟ್ (ಭಾರತೀಯ ಮಾನದಂಡಗಳ ಕಾಯ್ದೆ) 2016 ರ ನಿಬಂಧನೆಗಳನ್ನು ಉಲ್ಲಂಘನೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ದುಷ್ಕೃತ್ಯಗಳನ್ನು ತಡೆಯಲು ಮತ್ತು ಉಲ್ಲಂಘಿಸುವವರ ವಿರುದ್ಧ ಬಿಎಸ್ಐ ವತಿಯಿಂದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು.ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಬಿಎಸ್ಐ ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಬಿಎಸ್ಐ ಕೇರ್ ಬಿಡುಗಡೆ ಮಾಡಿದ್ದು, ಬಿಎಸ್ಐ ಅಭಿವೃದ್ಧಿಪಡಿಸಿದ ಅಧಿಕೃತ ಅಪ್ಲಿಕೇಶನ್,ಆಂಡ್ರಾಯ್ಡ್ ಮತ್ತು ಐಒಎಸ್ ಎರಡೂ ವೇದಿಕೆಗಳಲ್ಲಿ ಈ ಆಫ್ಯ್ ನ ಮೂಲಕ ಬಳಕೆದಾರರು ಕೆಳಗಿನ ಸೇವೆಗಳನ್ನು ಪಡೆಯಬಹುದಾಗಿದೆ.
ಈ ಮೂಲಕ ಬಿಎಸ್ಐ ಗುರುತು ಹೊಂದಿರುವ ಉತ್ಪನ್ನಗಳ ಸತ್ಯಾಸತ್ಯೆಯನ್ನು , ಬಿಎಸ್ಐ ಪರವಾನಗಿ ಮತ್ತು ಹಾಲ್ ಮಾರ್ಕಿಂಗ್ ನೊಂದಣಿ ಸಂಖ್ಯೆಗಳ ಮಾನ್ಯತೆ ಪರೀಶೀಲಿಸಬಹುದು. ಹಾಗೂ ಐಎಸ್ಐ ಗುರುತುಗಳ ದುರುಪಯೋಗ ಅಥವಾ ಗುಣಮಟ್ಟದ ಸಮಸ್ಯೆಗಳ ಬಗ್ಗೆ ದೂರು ನೀಡಬಹುದು. ಭಾರತೀಯ ಮಾನದಂಡಗಳು ಮತ್ತು ಬಿಎಸ್ಐ ಉಪಕ್ರಮಗಳ ಬಗ್ಗೆ ಇತ್ತೀಚಿನ ಮಾಹಿತಿಯನ್ನು ಪಡೆಯಬಹುದು.ಸಾರ್ವಜನಿಕರು ಯಾವುದೇ ಅನುಮಾನಾಸ್ಪದ ಐಎಸ್ಐ ಗುರುತು ದುರ್ಬಳಕೆಯ ಬಗ್ಗೆ ಕಂಡು ಬಂದಲ್ಲಿ ಬಿಎಸ್ಐ ಕೇರ್ ಆಪ್ ಅಥವಾ ಸಮೀಪದ ಬಿಎಸ್ಐ ಕಚೇರಿಗೆ ಸಂಪರ್ಕಿಸುವಂತೆ ದೂರು ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.