ರಸ್ತೆ ಪಕ್ಕದಲ್ಲಿ ಕೋಳಿ ಮಾಂಸದ ತ್ಯಾಜ್ಯ ಪ್ರಯಾಣಿಕರಿಗೆ ತೊಂದರೆ

ಲೋಕದರ್ಶನ ವರದಿ

ಘಟಪ್ರಭಾ 20: ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕೋಳಿ ಮಾಂಸದ ತ್ಯಾಜ್ಯವನ್ನು ಎಸೆಯಲಾಗುತ್ತಿದ್ದು, ಇದರ ದುರ್ವಾಸನೆಯಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಸಂಕೇಶ್ವರ-ಯರಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ಘಟಪ್ರಭಾ- ಗೋಕಾಕ ರಸ್ತೆಯ ಕೆ.ಎಚ್.ಐ ಪೆಟ್ರೋಲ್ ಪಂಪ ಹತ್ತಿರ ದಿನನಿತ್ಯ ಘಟಪ್ರಭಾ ನಗರ ವ್ಯಾಪ್ತಿಯ ಚಿಕ್ಕನ್ ಅಂಗಡಿಗಳಲ್ಲಿ ಸಂಗ್ರಹವಾಗುವ ಕೋಳಿ ಮಾಂಸದ ತ್ಯಾಜ್ಯವನ್ನು ಇಲ್ಲಿಗೆ ತಂದು ಎಸೆಯಲಾಗುತ್ತಿದೆ. ರಾತ್ರಿ ವೇಳೆಯಲ್ಲಿ ಇದು ನಿರ್ಜನ ಪ್ರದೇಶ ವಾಗಿದ್ದರಿಂದ ತ್ಯಾಜ್ಯ ಎಸೆಯುವವರಿಗೆ ಅನುಕೂಲವಾಗಿದೆ. 

ಮಾಂಸದ ವಾಸನೆಗೆ ಇಲ್ಲಿ ಹತ್ತಾರು ನಾಯಿಗಳು ಜಮಾಯಿಸಿ ರಸ್ತೆತುಂಬೆಲ್ಲ ಅಡ್ಡಾ ತಿಡ್ಡ ಓಡಾಡುತ್ತಿರುವುದುರಿಂದ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿ ದಿನಾಲು ಒಂದಿಲ್ಲ ಒಂದು ನಾಯಿಗಳು ಸಾವನಪ್ಪುತ್ತಿವೆ. ಇತ್ತೀಚಿಗೆ ಓರ್ವ ದ್ವೀಚಕ್ರ ವಾಹನ ಸವಾರನಿಗೆ ನಾಯಿ ಅಡ್ಡ ಬಂದ ಪರಿಣಾಮ ಓರ್ವ ಗರ್ಭಿಣಿ ಮಹಿಳೆ ಕೆಳಗೆ ಬಿದ್ದು ಗಾಯಗೊಂಡಿದ್ದಾಳೆಂದು ಪ್ರತ್ಯೇಕ್ಷದರ್ಶಿಗಳು ತಿಳಿಸಿದ್ದಾರೆ.  

ದುರ್ವಾಸನೆಯಿದ ಪ್ರಯಾಣಿಕರು ಹಾಗೂ ಅಕ್ಕ ಪಕ್ಕದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಅತೀ ಸಮೀಪದಲ್ಲಿ ಘಟಪ್ರಭಾ ಪೊಲೀಸ ಠಾಣೆಯಿದ್ದರೂ ಸಹ ತ್ಯಾಜ್ಯ ಎಸೆಯುವವರಿಗೆ ಭಯವಿಲ್ಲದಂತಾಗಿದೆ. 

ಕೂಡಲೇ ಸಂಬಂದಿಸಿದ ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು ಹಾಗೂ ಧುಪದಾಳ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಘಟಪ್ರಭಾ ಪೊಲೀಸ ಠಾಣೆಯ ಪಿ.ಎಸ್.ಐ ಸಾಹೇಬರು ಇಲ್ಲಿ ಎಸೆದಿರುವ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿ ಮುಂದೆ ಇಲ್ಲಿ ಯಾವುದೇ ರೀತಿಯ ತ್ಯಾಜ್ಯವನ್ನು ಎಸೆಯದಂತೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.